ADVERTISEMENT

‘ನಾಯಿಗಳು ಶವವನ್ನು ಎಳೆದು ತಿಂದಿವೆ’: ಆಂಧ್ರ ಸರ್ಕಾರದ ವಿರುದ್ಧ ನಾಯ್ಡು ಆರೋಪ

ಏಜೆನ್ಸೀಸ್
Published 11 ಆಗಸ್ಟ್ 2020, 13:36 IST
Last Updated 11 ಆಗಸ್ಟ್ 2020, 13:36 IST
ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು
ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು   

ಅಮರಾವತಿ: ಪ್ರಕಾಶಂ ಜಿಲ್ಲೆಯ ಆಸ್ಪತ್ರೆಯೊಂದರ ಬಳಿ ನಿರ್ಲಕ್ಷಿತ ಶವವೊಂದು ಬಿದ್ದಿದೆ ಎಂದು ಆರೋಪಿಸಿ ವಿಡಿಯೊವನ್ನು ಹಂಚಿಕೊಂಡಿರುವ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಆಂಧ್ರ ಪ್ರದೇಶ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಟ್ವಿಟರ್‌ನಲ್ಲಿ27 ಸೆಕೆಂಡ್‌‌ಗಳ ವಿಡಿಯೊ ಹಂಚಿಕೊಂಡಿರುವ ನಾಯ್ಡು, ಶವವನ್ನು ನಾಯಿಗಳು ಕಚ್ಚಿ ತಿನ್ನುತ್ತಿವೆ. ಇದು ಆಸ್ಪತ್ರೆಗಳ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿರುವುದನ್ನು ಸ್ಪಷ್ಟ ನಿದರ್ಶನವಾಗಿದೆ ಎಂದು ಆರೋಪಿಸಿದ್ದಾರೆ.

‘ಇದು ಹೃದಯ ವಿದ್ರಾವಕವಾದದ್ದು. ನಿರ್ಲಕ್ಷಿತ ರೋಗಿಯ ಶವವೊಂದು ಎರಡು ದಿನಗಳಿಂದ ಒಂಗೊಳೆಯ ಸಾರ್ವಜನಿಕ ಆಸ್ಪತ್ರೆ ಬಳಿ ಇದೆ. ನಾಯಿಗಳು ಅದನ್ನು ಗಾಯಗೊಳಿಸುತ್ತಿರುವುದು ಮತ್ತು ತಿನ್ನುತ್ತಿರುವುದು ಇತರ ರೋಗಿಗಳಲ್ಲಿ ಭೀತಿ ಉಂಟು ಮಾಡಿದೆ. ಇದು ವ್ಯಕ್ತಿಯ ಘನತೆಯ ಗಂಭೀರ ಉಲ್ಲಂಘನೆ ಮತ್ತು ಆಂಧ್ರ ಪ್ರದೇಶ ಸರ್ಕಾರದ ವೈಫಲ್ಯವಾಗಿದೆ. ಇದನ್ನು ಖಂಡಿಸಲು ನನ್ನಲ್ಲಿ ಪದಗಳೇ ಉಳಿದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಆದರೆ, ಮಾಜಿ ಮುಖ್ಯಮಂತ್ರಿಯ ಈ ಆರೋಪವನ್ನು ಒಂಗೊಳೆ ಪಟ್ಟಣ ಪೊಲೀಸ್‌ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಭೀಮಾ ನಾಯಕ್‌ ತಳ್ಳಿಹಾಕಿದ್ದಾರೆ.

ನಾಯಕ್‌ ಅವರು, ಆಗಸ್ಟ್‌ 8ರಂದು ಆಸ್ಪತ್ರೆಗೆ ದಾಖಲಾಗಿದ್ದ ಎಂ.ರಾಧಕೃಷ್ಣ ರೆಡ್ಡಿ ಎಂಬಾತ ಆಗಸ್ಟ್‌ 9 ಮತ್ತು 10ರ ಮಧ್ಯರಾತ್ರಿ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿದ್ದಾರೆ.

‘ಆತ (ರೋಗಿಯು) ಆಗಸ್ಟ್‌ 9 ಮತ್ತು 10ರ ಮಧ್ಯರಾತ್ರಿ ವೇಳೆ ಆಸ್ಪತ್ರೆಯ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧಪ್ರಕರಣ ದಾಖಲಾಗಿದ್ದು, ಅದೇ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮಾತ್ರವಲ್ಲದೆ ಅದೇ ದಿನ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಆತನ ಸಂಬಂಧಿಕರು ಶವವನ್ನು ನಿನ್ನೆ ಸಂಜೆಯೇ ತೆಗೆದುಕೊಂಡು ಹೋಗಿದ್ದಾರೆ. ನಾಯಿಗಳು ದೇಹವನ್ನು ತಿಂದಿವೆ ಎನ್ನಲು ಸಾಧ್ಯವೇ ಇಲ್ಲ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.