ADVERTISEMENT

ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಪಿ.ಬಿ.ಸಾವಂತ್‌ ನಿಧನ

ಪಿಟಿಐ
Published 15 ಫೆಬ್ರುವರಿ 2021, 19:28 IST
Last Updated 15 ಫೆಬ್ರುವರಿ 2021, 19:28 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ನಿವೃತ್ತ ನ್ಯಾಯಮೂರ್ತಿ ಪಿ.ಬಿ.ಸಾವಂತ್ ಸೋಮವಾರ ಇಲ್ಲಿ ನಿಧನರಾದರು. ಅವರಿಗೆ 91 ವರ್ಷವಾಗಿತ್ತು. ಇವರಿಗೆ ಪತ್ನಿ ಜಯಶ್ರೀ, ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ.

ಜೂನ್‌ 30, 1930ರಲ್ಲಿ ಜನಿಸಿದ್ದ ಅವರು ಅರ್ಥಶಾಸ್ತ್ರ ವಿಷಯದಲ್ಲಿ ಬಿ.ಎ (ವಿಶೇಷ) ಆನರ್ಸ್ ಪದವಿ, ಬಳಿಕ ಬಾಂಬೆ ವಿಶ್ವವಿದ್ಯಾಲಯದಲ್ಲಿ ಎಲ್‌.ಎಲ್‌.ಬಿ ಶಿಕ್ಷಣ ಪಡೆದಿದ್ದರು. ಬಾಂಬೆ ಹೈಕೋರ್ಟ್‌ನಲ್ಲಿಯೇ ವಕೀಲಿ ವೃತ್ತಿ ಆರಂಭಿಸಿದ್ದರು.

ಬಾಂಬೆ ಹೈಕೋರ್ಟ್, ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿ, ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಪುಣೆಯ ಶನಿವಾರವಾಡಾದಲ್ಲಿ 2017ರಲ್ಲಿ ನಡೆದಿದ್ದ ಎಲ್ಗಾರ್ ಪರಿಷದ್‌ ಅಧ್ಯಕ್ಷತೆಯನ್ನು ವಹಿಸಿದ್ದರು.

ADVERTISEMENT

ನ್ಯಾಯಾಂಗದ ಸಿವಿಲ್, ಕ್ರಿಮಿನಲ್‌, ಕೈಗಾರಿಕಾ, ಸೇವಾ ಚುನಾವಣೆ, ಸಂವಿಧಾನ, ಕೋ–ಆಪರೇಟಿವ್ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದರು. ಬಾಂಬೆಯ ನ್ಯೂ ಲಾ ಕಾಲೇಜಿನಲ್ಲಿ ಒಂದು ವರ್ಷ ಕಾಲ ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿದ್ದರು.

1973ರಲ್ಲಿ ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿಯಾಗಿದ್ದು, 1982ರ ಏರ್ ಇಂಡಿಯಾ ವಿಮಾನ ಅಪಘಾತ ಪ್ರಕರಣ ಸೇರಿ ಹಲವು ಪ್ರಕರಣಗಳ ವಿಚಾರಣೆ ನಡೆಸಿದ್ದರು. 1989ರಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.