ಕೆ.ಟಿ.ರಾಮರಾವ್
ಹೈದರಾಬಾದ್: ‘ಫಾರ್ಮುಲಾ ಇ– ರೇಸ್’ ಭ್ರಷ್ಟಾಚಾರ ಪ್ರಕರಣದಲ್ಲಿ ಬಿಆರ್‌ಎಸ್ ನಾಯಕ ಕೆ.ಟಿ.ರಾಮರಾವ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು.
‘ಎಲ್ಲ ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸಿದ್ದು, ಅಗತ್ಯವಿದ್ದರೆ ಮತ್ತೆ ಹಾಜರಾಗುತ್ತೇನೆ’ ಎಂದು ಎಸಿಬಿ ಮುಖ್ಯಕಚೇರಿಯಿಂದ ಹೊರಬಂದ ಬಳಿಕ ಸುದ್ದಿಗಾರರ ಪ್ರಶ್ನೆಗೆ ರಾಮರಾವ್ ಪ್ರತಿಕ್ರಿಯಿಸಿದರು.
ಫಾರ್ಮುಲಾ ಇ–ರೇಸ್‌ನಲ್ಲಿನ ಅಕ್ರಮಗಳಿಗೆ ಸಂಬಂಧಿಸಿ ಎಸಿಬಿ ಮೊಕದ್ದಮೆ ದಾಖಲಿಸಿದೆ. ರಾಮರಾವ್ ಪ್ರಮುಖ ಆರೋಪಿಯಾಗಿದ್ದು, ಸುಮಾರು 6 ಗಂಟೆ ವಿಚಾರಣೆ ಎದುರಿಸಿದರು.
‘ನನ್ನ ವಿರುದ್ಧ ಸುಳ್ಳು ಮೊಕದ್ದಮೆಯನ್ನು ದಾಖಲಿಸಿದ್ದು, ಅದು ತರ್ಕರಹಿತವಾಗಿದೆ. ಸರ್ಕಾರದ ಒತ್ತಡದ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಈ ರೀತಿ ವರ್ತಿಸುತ್ತಿದ್ದಾರೆ’ ಎಂದು ಪ್ರತಿಪಾದಿಸಿದರು.
‘ರಾಜಕೀಯ ಒತ್ತಡ ಹಿನ್ನೆಲೆಯ ಪ್ರಕರಣಗಳ ಮೂಲಕ ಏನಾದರೂ ಸಾಧನೆ ಮಾಡಬಹುದು ಎಂದು ಮುಖ್ಯಮಂತ್ರಿ ರೇವಂತ ರೆಡ್ಡಿ ಭಾವಿಸಿದ್ದರೆ ಅದು ಅವರ ಮೂರ್ಖತನ’ ಎಂದು ಕಟುವಾಗಿ ಪ್ರತಿಕ್ರಿಯಿಸಿದರು.
‘ರೇವಂತರೆಡ್ಡಿ ಅವರು ನೀಡಿದ್ದ ಐದು ಪ್ರಶ್ನೆಗಳನ್ನೇ ಅಧಿಕಾರಿಗಳು ಹಲವು ರೀತಿಯಲ್ಲಿ ಕೇಳಿದರು. ಆದರೆ, ಫಾರ್ಮುಲಾ ಇ–ರೇಸ್‌ನಲ್ಲಿ ಯಾವುದೇ ಭ್ರಷ್ಟಾಚಾರ ಆಗಿಲ್ಲ. ರೇಸ್‌ನ ಆಯೋಜಕರು ಅಂಗೀಕಾರ ನೀಡಿದ್ದ ಹಣದ ಪಾವತಿಗೆ ನಾನು ಅನುಮೋದನೆ ನೀಡಿದ್ದೇನಷ್ಟೇ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.