ADVERTISEMENT

ದೆಹಲಿಯ ಪ್ರತಿ ಐದರಲ್ಲಿ 4 ಕುಟುಂಬಗಳಿಗೆ ವಾಯುಮಾಲಿನ್ಯದಿಂದ ಅನಾರೋಗ್ಯ: ಸಮೀಕ್ಷೆ

ಪಿಟಿಐ
Published 8 ನವೆಂಬರ್ 2021, 9:57 IST
Last Updated 8 ನವೆಂಬರ್ 2021, 9:57 IST
ದೆಹಲಿಯ ವಾಯುಮಾಲಿನ್ಯ: ಪಿಟಿಐ ಚಿತ್ರ
ದೆಹಲಿಯ ವಾಯುಮಾಲಿನ್ಯ: ಪಿಟಿಐ ಚಿತ್ರ   

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಳವಾಗಿರುವ ವಾಯುಮಾಲಿನ್ಯದಿಂದಾಗಿ ಈ ಭಾಗದ ಪ್ರತಿ ಐದು ಕುಟುಂಬಗಳ ಪೈಕಿ 4 ಕುಟುಂಬಗಳು ಒಂದು ಅಥವಾ ಎರಡು ಆರೋಗ್ಯ ಸಮಸ್ಯೆ ಎದುರಿಸುತ್ತಿವೆ ಎಂದು ಸಾಮಾಜಿಕ ಮಾಧ್ಯಮ ವೇದಿಕೆಯೊಂದು ನಡೆಸಿರುವ ಸಮೀಕ್ಷೆ ತಿಳಿಸಿದೆ.

ದೆಹಲಿಯಲ್ಲಿ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಸಂಚಾರ ನಿರ್ಬಂಧ ಮತ್ತು ಪಟಾಕಿ ಮಾರಾಟ ತಡೆಯುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂಬುದು ಶೇಕಡಾ 91ರಷ್ಟು ದೆಹಲಿ ಜನರ ಅಭಿಪ್ರಾಯವಾಗಿದೆ ಎಂದು ಲೋಕಲ್ ಸರ್ಕಲ್ ನಡೆಸಿದ ಸಮೀಕ್ಷೆಯಲ್ಲಿ ಗೊತ್ತಾಗಿದೆ.

ದೆಹಲಿ, ಗುರ್‌ಗಾಂವ್, ನೋಯ್ಡಾ, ಗಾಜಿಯಾಬಾದ್, ಫರಿದಾಬಾದ್ ಸೇರಿದಂತೆ ಈ ಭಾಗದಲ್ಲಿ ವಾಸಿಸುವ 34 ಸಾವಿರಕ್ಕೂ ಹೆಚ್ಚು ಜನರಿಂದ ಈ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಇದರಲ್ಲಿ ಶೇಕಡಾ 66ರಷ್ಟು ಪುರುಷರಿದ್ದರೆ, ಶೇಕಡಾ 34 ರಷ್ಟು ಮಹಿಳೆಯರಿದ್ದರು.

ADVERTISEMENT

ಕಳೆದ ವಾರದಿಂದ ದೆಹಲಿ–ಎನ್‌ಸಿಆರ್ ಹವಾಗುಣ ತೀರಾ ಹದಗೆಟ್ಟ ಬಳಿಕ ನೀವು ಯಾವ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೀರಾ ಎಂದು ಅವರನ್ನು ಕೇಳಲಾಗಿತ್ತು.

ಇದರಲ್ಲಿ ಶೇಕಡಾ 16ರಷ್ಟು ಮಂದಿ ಮೂಗು ಸೋರುವಿಕೆ, ಕೆಮ್ಮು ಅಥವಾ ಎರಡೂ ತೊಂದರೆ ಇರುವ ಬಗ್ಗೆ ಹೇಳಿದ್ದಾರೆ. ಶೇಕಡಾ 16 ಮಂದಿ ನಿರಂತರ ಮೂಗು ಸೋರುವಿಕೆ, ಶೀತ ಮತ್ತು ಕಣ್ಣು ಉರಿವಿಕೆಯಂತಹ ಸಮಸ್ಯೆ ಎದುರಿಸುತ್ತಿದ್ಧಾರೆ. ಇನ್ನೂ ಶೇಕಡಾ 16ರಷ್ಟು ಮಂದಿ ಉಸಿರಾಟದ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ.

ಕೇವಲ ಶೇಕಡಾ 20ರಷ್ಟು ಮಂದಿ ಮಾತ್ರ ಮಾಲಿನ್ಯಗೊಂಡ ವಾತಾವರಣದಿಂದ ಯಾವುದೇ ಸಮಸ್ಯೆಗೆ ತುತ್ತಾಗಿಲ್ಲ. ಒಟ್ಟಾರೆ ದೆಹಲಿಯಲ್ಲಿ ಸದ್ಯ ಐದುಕುಟುಂಬಗಳ ಪೈಕಿ 4 ಕುಟುಂಬಗಳು ಕಲುಷಿತ ವಾತಾವರಣದಿಂದ ಒಂದು ಅಥವಾ ಅದಕ್ಕಿಂತ ಹೆಚ್ಚು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.

ಶೇಕಡಾ 24ರಷ್ಟು ಮಂದಿಗೆ ಮೇಲೆ ತಿಳಿಸಿದ ಎಲ್ಲ ಸಮಸ್ಯೆಗಳು ಕಂಡುಬಂದಿವೆ.

ಕಲುಷಿತ ವಾತಾವರಣದಿಂದ ಉಂಟಾದ ಅನಾರೋಗ್ಯ ದಿಂದಾಗಿ ಈಗಾಗಲೇ ತಾವು ಅಥವಾ ತಮ್ಮ ಕುಟುಂಬದ ಕೆಲವರು ವೈದ್ಯರನ್ನು ಸಂಪರ್ಕಿಸಿರುವುದಾಗಿ ಶೇಕಡಾ 22ರಷ್ಟು ಮಂದಿ ಹೇಳಿದ್ದಾರೆ.

ದೆಹಲಿಯ ಸದ್ಯದ ಭೀಕರ ಮಾಲಿನ್ಯ ಪರಿಸ್ಥಿತಿಯಿಂದ ಪಾರಾಗಲು ದೆಹಲಿ–ಎನ್‌ಸಿಆರ್‌ನ ಶೇಕಡಾ 28ರಷ್ಟು ಮಂದಿ ಏರ್ ಪ್ಯೂರಿಫೈಯರ್ ಬಳಸಿದರೆ, ಶೇಕಡಾ 61ರಷ್ಟು ಮಂದಿ ಮಾಸ್ಕ್‌ಗಳನ್ನು ಬಳಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.