ಸಾಂದರ್ಭಿಕ ಚಿತ್ರ
ಇಂಫಾಲ: ಮಣಿಪುರದ ಪಶ್ಚಿಮ ಇಂಫಾಲ್ ಮತ್ತು ಟೆಂಗ್‌ನೌಪಾಲ್ ಜಿಲ್ಲೆಗಳಿಂದ ಒಂಭತ್ತು ಭಯೋತ್ಪಾದಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ನಿಷೇಧಿತ ಕಾಂಗ್ಲೀಪಾಕ್ ಕಮ್ಯುನಿಸ್ಟ್ ಪಕ್ಷದ (ಅಪುನ್‌ಬಾ) ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಪಶ್ಚಿಮ ಇಂಫಾಲ್ ಜಿಲ್ಲೆಯ ರೂಪಮಹಲ್ ಟ್ಯಾಂಕ್ ಎಂಬಲ್ಲಿ ಸೋಮವಾರ ಬಂಧಿಸಲಾಗಿದೆ. ಈ ಉಗ್ರರು ರೂಪಮಹಲ್ ಟ್ಯಾಂಕ್ ಪ್ರದೇಶದಲ್ಲಿ ಸುಲಿಗೆ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಟೆಂಗ್‌ನೌಪಾಲ್ ಜಿಲ್ಲೆಯಲ್ಲಿ ಭಾನುವಾರ ನಡೆದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಯುನೈಟೆಡ್ ನ್ಯಾಷನಲ್ ಲಿಬರೇಷನ್ ಫ್ರಂಟ್ (ಕೊಯಿರೆಂಗ್) ಮತ್ತು ಪ್ರೀಪಾಕ್ ಸಂಘಟನೆಗೆ ಸೇರಿದ ಇಬ್ಬರನ್ನು ಹಾಗೂ ನಿಷೇಧಿತ ಕೆಸಿಪಿ (ತಾಯ್‌ಬಂಗನ್‌ಬಾ) ಗುಂಪಿನ ಐವರು ಸದಸ್ಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರ ಬಳಿಯಿದ್ದ ಒಂದು ಎಲ್ಎಂಜಿ ರೈಫಲ್, ಒಂದು ಎಸ್ಎಲ್ಆರ್ ರೈಫಲ್, ಎರಡು ಐಎನ್ಎಸ್ಎಎಸ್ ರೈಫಲ್‌ಗಳು, ಒಂದು ಎಕೆ–47 ರೈಫಲ್ ಜೊತೆಗೆ 14 ಸುತ್ತಿನ ಮ್ಯಾಗಜಿನ್‌ಗಳು, ಸ್ಫೋಟಕಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.
ಅಲ್ಲದೆ, ಚುರಚಾಂದ್‌ಪುರ ಜಿಲ್ಲೆಯಲ್ಲಿ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಭಾನುವಾರ ಬಂಧಿಸಲಾಗಿತ್ತು. ಆತನ ಬಳಿ ಇದ್ದ ಒಂದು ಕೋಲ್ಟ್ 7.65 ಎಂಎಂ ಆಟೊ ಪಿಸ್ತೂಲ್, 9 ಎಂಎಂ ಪಿಸ್ತೂಲ್ (ನಾಡ ಬಂದೂಕು), ಮೂರು ಮ್ಯಾಗಜಿನ್‌ಗಳು, 16 ಬಗೆಯ ಸ್ಫೋಟಕಗಳು ಮತ್ತು ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.