ADVERTISEMENT

ಬಿಜೆಪಿ ಸೇರಲು ನಾಲ್ವರು ಟಿಡಿಪಿ ರಾಜ್ಯಸಭೆ ಸದಸ್ಯರ ಒಲವು

ಪಕ್ಷಾಂತರಕ್ಕೆ ಮುಖಂಡರ ಒಲವು, ಮಾಜಿ ಶಾಸಕರಿಂದ ಪ್ರತ್ಯೇಕ ಸಭೆ, ಟಿಡಿಪಿಗೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 20:39 IST
Last Updated 20 ಜೂನ್ 2019, 20:39 IST
   

ಅಮರಾವತಿ: ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನಿಂದಚೇತರಿಸಿಕೊಳ್ಳುವ ಮೊದಲೇ ಎನ್‌.ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಪಕ್ಷಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ.

ರಾಜ್ಯಸಭೆಯಲ್ಲಿ ಪಕ್ಷದ ಆರು ಸದಸ್ಯರ ಪೈಕಿ ಮಾಜಿ ಸಚಿವ ವೈ.ಎಸ್‌.ಚೌಧರಿ ಸೇರಿದಂತೆ ನಾಲ್ವರು ಸದಸ್ಯರು ಬಿಜೆಪಿ ಜೊತೆ ಸಖ್ಯ ಬೆಳೆಸಿದ್ದು, ಪ್ರತ್ಯೇಕ ಗುಂಪು ಎಂದು ಪರಿಗಣಿಸಲು ರಾಜ್ಯಸಭೆ ಅಧ್ಯಕ್ಷರಿಗೆ ಕೋರಿದ್ದಾರೆ.

ಚೌಧರಿ ಅವರಲ್ಲದೆ ಸಿ.ಎಂ.ರಮೇಶ್‌, ಟಿ.ಜಿ.ವೆಂಕಟೇಶ್‌, ಗರಿಕಪತಿ ಮೋಹನ್‌ ರಾವ್‌ ಅವರೇ ಬಿಜೆಪಿ ಜೊತೆಗೆ ಸಂಪರ್ಕದಲ್ಲಿರುವ ತೆಲುಗುದೇಶಂ ಪಕ್ಷದ ಇತರೆ ಸದಸ್ಯರು.

ADVERTISEMENT

ಪಕ್ಷದ ರಾಜ್ಯಸಭೆ ಸದಸ್ಯರ ಈ ನಡೆಯ ಹಿಂದೆಯೇ, ಇನ್ನೊಂದೆಡೆ ಪಕ್ಷದ, ಬಹುತೇಕ ಕಾಪು ಸಮುದಾಯ ಪ್ರತಿನಿಧಿಸುವ 20 ಮಾಜಿ ಶಾಸಕರು ಕಾಕಿನಾಡದಲ್ಲಿ ಪ್ರತ್ಯೇಕವಾಗಿ ಸಭೆ ಸೇರಿ ಚರ್ಚಿಸಿದ್ದಾರೆ.

ಚಂದ್ರಬಾಬು ನಾಯ್ಡು ಅವರು ಪ್ರಸ್ತುತ ಕುಟುಂಬ ಸದಸ್ಯರ ಜೊತೆಗೆ ಯೂರೋಪ್‌ ಪ್ರವಾಸದಲ್ಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಈ ಬೆಳವಣಿಗೆಗಳು ನಡೆದಿವೆ.

ಪ್ರತ್ಯೇಕ ಸಭೆ ನಡೆಸಿರುವ ಮಾಜಿ ಶಾಸಕರು ಬಿಜೆಪಿ ಸೇರ್ಪಡೆಯನ್ನು ತಳ್ಳಿಹಾಕಿದ್ದರೂ, ಮೂಲಗಳ ಪ್ರಕಾರ ನಾಯ್ಡು ಅವರು ವಿದೇಶ ಪ್ರವಾಸದಿಂದ ಹಿಂದಿರುಗುವ ಮುನ್ನವೇ ಪಕ್ಷಾಂತರ ಬೆಳವಣಿಗೆಗಳು ಪೂರ್ಣಗೊಳ್ಳಲಿವೆ.

ಈ ಮಧ್ಯೆ, ದಿಢೀರ್ ಬೆಳವಣಿಗೆ ಕುರಿತಂತೆ ಚಂದ್ರಬಾಬುನಾಯ್ಡು ಅವರು ಯುರೋಪ್‌ನಿಂದಲೇ ಮಾತನಾಡಿದ್ದು, ವೈ.ಎಸ್‌. ಚೌಧರಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಟಿ.ವಿ.ವಾಹಿನಿಯೊಂದಕ್ಕೆ ಈಚೆಗೆ ನೀಡಿದ್ದ ಸಂದರ್ಶನದಲ್ಲಿಯೂ ಚೌಧರಿ ತ‌ಮ್ಮ ಬೇಸರವನ್ನು ಹೊರಹಾಕಿದ್ದರು. ‘ನಾನು ಪಕ್ಷ ಬಿಟ್ಟ ಸಂದರ್ಭದಲ್ಲಿ ಅದಕ್ಕೆ ಕಾರಣಗಳನ್ನು ವಿವರಿಸುತ್ತೇನೆ’ ಎಂದೂ ಹೇಳಿದ್ದರು.

ವೈ.ಎಸ್‌.ಚೌಧರಿ ಅವರು ಉದ್ಯಮಿ. ಜೊತೆಗೆ ಇನ್ನೊಬ್ಬ ಸದಸ್ಯ ಸಿ.ಎಂ.ರಮೇಶ್‌ ಅವರು ಬ್ಯಾಂಕ್‌ ಸಾಲ ಮರುಪಾವತಿಗೆ ವಿಫಲ ಪ್ರಕರಣದಲ್ಲಿ ಸಿಬಿಐ, ಜಾರಿನಿರ್ದೇಶನಾಲಯದ ವಿಚಾರಣೆ ಎದುರಿಸಿದ್ದಾರೆ.

ಇನ್ನೊಂದೆಡೆ, ಬಿಜೆಪಿ ಹೈಕಮಾಂಡ್‌ ಕೂಡಾ ಎನ್‌ಟಿಆರ್‌ ಪುತ್ರಿ ಪುರಂದೇಶ್ವರಿ ಸೇರಿದಂತೆ ಪಕ್ಷದ ರಾಜ್ಯ ನಾಯಕರ ವಿರುದ್ಧ ಅಸಮಾಧಾನ ಹೊಂದಿದೆ. ರಾಜ್ಯದಲ್ಲಿ ಪರಿಣಾಮಕಾರಿ ನಾಯಕತ್ವ ರೂಪಿಸಲು ವಿಫಲರಾಗಿರುವ ಬಿಜೆಪಿ ಈಗ ಕಾಪು ಸಮುದಾಯದ ನಾಯಕರನ್ನು ಸೆಳೆಯಲು ಮುಂದಾಗಿದೆ.

ಈ ಮಧ್ಯೆ ಕೆಲ ಶಾಸಕರೂ ಕೂಡಾ ಬಿಜೆಪಿಗೆ ಪಕ್ಷಾಂತರ ಮಾಡಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ. ಇದರೊಂದಿಗೆ, ಚಂದ್ರಬಾಬು ನಾಯ್ಡು ಅವರಿಗೆ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನ ಸ್ಥಾನಮಾನವು ತಪ್ಪುವ ಆತಂಕವಿದೆ.

‘ಸೇರ್ಪಡೆಗೆ ನಾವು ಮುಕ್ತ ಅವಕಾಶ ನೀಡಿದರೆ 2024ರ ವೇಳೆಗೆ ರಾಜ್ಯದಲ್ಲಿ ಟಿಡಿಪಿ ಉಳಿಯುವುದಿಲ್ಲ’ ಎಂದು ಬಿಜೆಪಿ ನಾಯಕ ವಿಷ್ಣು ಕುಮಾರ್‌ ರಾಜು ಹೇಳಿದರು. ಇನ್ನೊಬ್ಬ ಮುಖಂಡ ವಿಷ್ಣುವರ್ಧನ ರೆಡ್ಡಿ, ‘ನಾಯ್ಡು ಅವರು ವಿದೇಶದಿಂದ ಮರಳುವ ಮೊದಲೇ ಅನಿರೀಕ್ಷಿತ ಬೆಳವಣಿಗೆಗಳು ನಡೆಯಲಿವೆ’ ಎಂದಿದ್ದಾರೆ.

ಟಿಡಿಪಿ ನಾಯಕರು ಪಕ್ಷದ ಪ್ರಧಾನ ಕಾರ್ಯದರ್ಶಿ, ನಾಯ್ಡು ಪುತ್ರ ನಾರಾ ಲೋಕೇಶ್‌ ವರ್ತನೆಯಿಂದ ಬೇಸರಗೊಂಡಿದ್ದಾರೆ. ಚುನಾವಣೆ ಹಿನ್ನಡೆಗಾಗಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ‘ಚುನಾವಣೆಯಲ್ಲಿ ಪಕ್ಷದ ಸೋಲಿನ ಹೊಣೆ ಹೊತ್ತು ಲೋಕೇಶ್‌ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದ್ದರು.

ಕಾಕಿನಾಡ: ಟಿಡಿಪಿ ಮಾಜಿ ಶಾಸಕರ ಸಭೆ
ಅಮರಾವತಿ:
ಪಕ್ಷದ ರಾಜ್ಯಸಭೆ ಸದಸ್ಯರು ಬಿಜೆಪಿಗೆ ಸೇರಿದ ಬೆನ್ನಹಿಂದೆಯೇ, ಕಾಪು ಸಮುದಾಯ ಪ್ರತಿನಿಧಿಸುವ ಪಕ್ಷದ 20 ಮಾಜಿ ಶಾಸಕರು ಕಾಕಿನಾಡದಲ್ಲಿ ಪ್ರತ್ಯೇಕವಾಗಿ ಸಭೆ ಸೇರಿ ಚರ್ಚಿಸಿದ್ದಾರೆ.

ಚಂದ್ರಬಾಬು ನಾಯ್ಡು ಪ್ರಸ್ತುತ ಯುರೋಪ್‌ ಪ್ರವಾಸದಲ್ಲಿದ್ದಾರೆ. ಪ್ರತ್ಯೇಕ ಸಭೆ ನಡೆಸಿರುವ ಮಾಜಿ ಶಾಸಕರು ಬಿಜೆಪಿ ಸೇರ್ಪಡೆಯನ್ನು ತಳ್ಳಿಹಾಕಿದ್ದರೂ, ಮೂಲಗಳ ಪ್ರಕಾರ ನಾಯ್ಡು ಅವರು ವಿದೇಶ ಪ್ರವಾಸದಿಂದ ಹಿಂದಿರುಗುವ ಮುನ್ನವೇ ಪಕ್ಷಾಂತರ ಬೆಳವಣಿಗೆ ನಡೆದರೆ ಆಶ್ಚರ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.