ADVERTISEMENT

ತಿರುಮಲ: ಬಾಲಕಿಯನ್ನು ಕೊಂದಿದ್ದ ಚಿರತೆ ವಿಭಿನ್ನ ಯೋಜನೆ ಮೂಲಕ ಸೆರೆ

ಪಿಟಿಐ
Published 28 ಆಗಸ್ಟ್ 2023, 6:51 IST
Last Updated 28 ಆಗಸ್ಟ್ 2023, 6:51 IST
Venugopala K.
   Venugopala K.

ತಿರುಪತಿ: ಆಂಧ್ರ ಪ್ರದೇಶದ ಪ್ರಮುಖ ಧಾರ್ಮಿಕ ಕೇಂದ್ರ ತಿರು‍ಪತಿ ತಿರುಮಲದ ಪಾದಯಾತ್ರೆ ವೇಳೆ ದಾಳಿ ಮಾಡಿ ಬಾಲಕಿಯನ್ನು ಕೊಂದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.

ಸೋಮವಾರ ಬೆಳಗಿನ ಜಾವ ತಿರುಮಲದಲ್ಲಿ 4ನೇ ಚಿರತೆಯನ್ನು ಸೆರೆ ಹಿಡಿಯಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ಧಾರೆ.

ಸುಮಾರು 5 ವರ್ಷ ಪ್ರಾಯದ ಗಂಡು ಚಿರತೆಯನ್ನು ಆಂಜನೇಯ ಸ್ವಾಮಿ ವಿಗ್ರಹವಿರುವ ಏಳನೇ ಮೈಲಿ ಬಳಿ ಹಿಡಿಯಲಾಗಿದೆ ಎಂದೂ ಅವರು ತಿಳಿಸಿದ್ದಾರೆ. ಬಳಿಕ, ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಶ್ರೀ ವೆಂಕಟೇಶ್ವರ ಮೃಗಾಲಯಕ್ಕೆ (ತಿರುಪತಿ ಮೃಗಾಲಯ) ಸ್ಥಳಾಂತರಿಸಿದೆ.

ADVERTISEMENT

‘ಈ ಚಿರತೆಯನ್ನು ಆಗಸ್ಟ್ 17ರಿಂದ ಸೆರೆಹಿಡಿಯಲು ಪ್ರಯತ್ನಿಸುತ್ತಿದ್ದೇವೆ. ಆಗಿನಿಂದ ತಪ್ಪಿಸಿಕೊಳ್ಳುತ್ತಿತ್ತು. ಬೋನಿನ ಬಳಿಗೆ ಬರುತ್ತಿದ್ದ ಚಿರತೆ ಈ ಮೊದಲು ಬೋನಿಗೆ ಬಿದ್ದಿದ್ದ ಚಿರತೆಗಳನ್ನು ನೋಡಿ ಓಡಿಹೋಗುತ್ತಿತ್ತು. ಹಾಗಾಗಿ, ಬೇರೆ ಮಾರ್ಗಗಳನ್ನು ಅನುಸರಿಸಿ ಸೆರೆ ಹಿಡಿದಿದ್ದೇವೆ’ ಎಂದು ತಿರುಪತಿ ಜಿಲ್ಲಾ ಅರಣ್ಯಾಧಿಕಾರಿ (ಡಿಎಫ್‌ಒ) ಎ ಶ್ರೀನಿವಾಸುಲು ತಿಳಿಸಿದರು.

ಕ್ಯಾಮೆರಾಗಳ ಫ್ಲ್ಯಾಶ್‌ಗಳನ್ನು ನಿಷ್ಕ್ರಿಯಗೊಳಿಸಿ, ಟ್ರ್ಯಾಪ್ ಸೈಟ್ ಬಳಿ ಮನುಷ್ಯರ ಸಂಚಾರದ ವಾಸನೆಯನ್ನು ಹೋಗಲಾಡಿಸಲು ಪ್ರಾಣಿಗಳ ಸಂಚಾರದ ವಾಸನೆ ಬರುವಂತಹ ದ್ರಾವಣವನ್ನು ಸಿಂಪಡಿಸಲಾಗಿತ್ತು ಎಂದು ಅವರು ಹೇಳಿದರು.

ಈ ಹಿಂದೆ ಸೆರೆ ಹಿಡಿದ ಮೂರೂ ಚಿರತೆಗಳು ಒಂದೇ ವಯೋಮಾನದವುಗಳಾಗಿದ್ದು, ಒಂದೇ ಚಿರತೆಯ ಮರಿಗಳಿರಬಹುದು ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ.

ಈ ಮಧ್ಯೆ, ಇತ್ತೀಚೆಗೆ ತಿರುಮಲದಲ್ಲಿ ಬಾಲಕಿಯನ್ನು ಕೊಂದಿದ್ದು ಇದೇ ಚಿರತೆ ಎಂದು ಶ್ರೀನಿವಾಸಲು ಖಚಿತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.