ADVERTISEMENT

ಯೋಗಿ ವಿರುದ್ಧ ಟ್ವೀಟ್‌: ಪತ್ರಕರ್ತ ಪ್ರಶಾಂತ್ ಕನೋಜಿ ಬಿಡುಗಡೆ ಸುಪ್ರೀಂ ಆದೇಶ

ವ್ಯಕ್ತಿ ಸ್ವಾತಂತ್ರ್ಯದ ದಮನ ಸಹಿಸಲಾಗದು ಎಂದ ಸರ್ವೋಚ್ಚ ನ್ಯಾಯಾಲಯ

ಪಿಟಿಐ
Published 11 ಜೂನ್ 2019, 15:55 IST
Last Updated 11 ಜೂನ್ 2019, 15:55 IST
ಪತ್ರಕರ್ತ ಪ್ರಶಾಂತ್‌ ಹೆಂಡತಿ ಜಗೀಶಾ ಅರೋರ ಅವರು ಸುಪ್ರೀಂ ಕೋರ್ಟ್‌ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು –ಪಿಟಿಐ ಚಿತ್ರ
ಪತ್ರಕರ್ತ ಪ್ರಶಾಂತ್‌ ಹೆಂಡತಿ ಜಗೀಶಾ ಅರೋರ ಅವರು ಸುಪ್ರೀಂ ಕೋರ್ಟ್‌ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು –ಪಿಟಿಐ ಚಿತ್ರ   

ನವದೆಹಲಿ: ಸಂವಿಧಾನವು ನೀಡಿರುವ ಸ್ವಾತಂತ್ರ್ಯದ ಮೂಲಭೂತ ಹಕ್ಕು ಪವಿತ್ರ ಮತ್ತು ಆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್‌, ಪತ್ರಕರ್ತ ಪ್ರಶಾಂತ್‌ ಕನೋಜಿಯಾ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಬಗ್ಗೆ ಅವಹೇಳನಕಾರಿ ಟ್ವೀಟ್‌ ಮಾಡಿದ ಆರೋಪದಲ್ಲಿ ಪ್ರಶಾಂತ್‌ ಅವರನ್ನು ಇದೇ 8ರಂದು ಬಂಧಿಸಲಾಗಿತ್ತು.

ಆದಿತ್ಯನಾಥ ಅವರ ಬಗ್ಗೆ ಪ್ರಶಾಂತ್‌ ಅವರ ಪೋಸ್ಟ್‌ ಅನ್ನು ಒಪ್ಪಲು ಸಾಧ್ಯವಿಲ್ಲ. ಹಾಗಿದ್ದರೂ ಸ್ವಾತಂತ್ರ್ಯದ ಹಕ್ಕನ್ನು ಸರ್ಕಾರವು ಮೊಟಕುಗೊಳಿಸಲು ಅವಕಾಶ ಕೊಡುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಅಜಯ್‌ ರಸ್ತೋಗಿ ಅವರ ಪೀಠವು ಹೇಳಿದೆ.

ADVERTISEMENT

ಹಕ್ಕು ಮೊಟಕಾದರೆ ಸುಮ್ಮನಿರಲಾಗದು:ಪ್ರಶಾಂತ್‌ ಅವರ ಹೆಂಡತಿ ಜಗೀಶಾ ಅರೋರ ಅವರು ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ (ನಾಪತ್ತೆಯಾಗಿರುವ ವ್ಯಕ್ತಿಯನ್ನು ಹಾಜರುಪಡಿಸುವಂತೆ ಅರ್ಜಿ) ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿತು.

ಆರೋಪಿಯು ನ್ಯಾಯಾಂಗ ಬಂಧನದಲ್ಲಿ ಇರುವುದರಿಂದ ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಬಾರದು ಎಂದು ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್ ವಿಕ್ರಮ್‌ಜಿತ್‌ ಬ್ಯಾನರ್ಜಿ ವಾದಿಸಿದರು.

ಆದರೆ ಇದನ್ನು ಪೀಠವು ಒಪ್ಪಲಿಲ್ಲ. ‘ಕಾನೂನು ಅತ್ಯಂತ ಸ್ಪಷ್ಟವಾಗಿದೆ. ವ್ಯಕ್ತಿಯ ಹಕ್ಕುಗಳನ್ನು ಹತ್ತಿಕ್ಕುವಂತಿಲ್ಲ. ಇದು 32ನೇ ವಿಧಿಯ ಅಡಿಯಲ್ಲಿನ ಅರ್ಜಿಯಾದರೂ ಅದನ್ನು ಸುಪ್ರೀಂ ಕೋರ್ಟ್‌ ಪುರಸ್ಕರಿಸಬಹುದು. ಸ್ವಾತಂತ್ರ್ಯದ ಹಕ್ಕನ್ನು ದಮನಿಸಿದಾಗ ಸುಪ್ರೀಂ ಕೋರ್ಟ್‌ ಕೈಕಟ್ಟಿ ಕೂರಲಾಗದು’ ಎಂದು ಪೀಠವು ಹೇಳಿತು.

ಪ್ರಶಾಂತ್‌ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುವುದರ ಬಗ್ಗೆ ಪೀಠವು ಅಚ್ಚರಿ ವ್ಯಕ್ತಪಡಿಸಿತು. ಇದು ಕೊಲೆ ಪ್ರಕರಣವೇ ಎಂದು ಪ್ರಶ್ನಿಸಿತು. ಪ್ರಕರಣದ ಅಂಶಗಳನ್ನು ಗಮನಿಸಿದರೆ ವ್ಯಕ್ತಿ 11 ದಿನ ಜೈಲಿಗೆ ತಳ್ಳುವುದಕ್ಕೆ ಅವಕಾಶ ನೀಡುವಂತಿಲ್ಲ ಎಂದಿತು.

‘ಪತ್ರಕರ್ತ ಪ‍್ರಶಾಂತ್‌ ಅವರಿಗೆ ಜಾಮೀನು ನೀಡಿದರೂ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್‌ ಅನ್ನು ನಾವು ಒಪ್ಪುತ್ತೇವೆ ಎಂದಲ್ಲ. ಆರೋಪಿಯು ಜೈಲಿನಲ್ಲಿದ್ದಾರೆ ಎಂಬುದೇ ನಮ್ಮ ಕಳಕಳಿ. ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು’ ಎಂದು ನ್ಯಾಯಮೂರ್ತಿಗಳು ಹೇಳಿದರು.

ಆರೋಪಿಯ ವಿರುದ್ಧದ ಕಾನೂನು ಪ್ರಕ್ರಿಯೆಯನ್ನು ವಜಾ ಮಾಡಬಾರದು ಅಥವಾ ಅದಕ್ಕೆ ತಡೆ ಕೊಡಬಾರದು ಎಂದು ಬ್ಯಾನರ್ಜಿ ಅವರು ಕೋರಿದರು.

ಪ್ರಕರಣವನ್ನು ವಜಾ ಮಾಡುವುದಿಲ್ಲ, ಅದು ಕಾನೂನು ಪ್ರಕಾರ ಮುಂದುವರಿಯಲಿ ಎಂದು ಪೀಠವು ಸ್ಪಷ್ಟಪಡಿಸಿತು.ಪ್ರಶಾಂತ್‌ ಅವರನ್ನು ತಕ್ಷಣವೇ ಬಿಡುಗಡೆ ಮಾಡುವ ಮೂಲಕ ರಾಜ್ಯ ಸರ್ಕಾರವು ಹೃದಯ ವೈಶಾಲ್ಯ ತೋರಬೇಕು ಎಂದು ಕೋರ್ಟ್‌ ಹೇಳಿತು.

ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ಗೆ ಬರುವ ಅಗತ್ಯ ಇಲ್ಲ ಎಂದು ಬ್ಯಾನರ್ಜಿ ವಾದಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಪೀಠ, ಸಾಮಾನ್ಯವಾಗಿ ಇಂತಹ ಅರ್ಜಿಗಳನ್ನು ವಿಚಾರಣೆಗೆ ಎತ್ತಿಕೊಳ್ಳುವುದಿಲ್ಲ. ಆದರೆ, ಬಂಧನ ತಪ್ಪು ಎಂದು ಎದ್ದು ಕಾಣಿಸುವಂತಹ ಪ್ರಕರಣದಲ್ಲಿ ‘ಹೈಕೋರ್ಟ್‌ಗೆ ಹೋಗಿ’ ಎಂದು ಹೇಳಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿತು.

ಬೇರೊಬ್ಬರ ಹಕ್ಕು ಮೊಟಕುಗೊಳ್ಳುತ್ತಿದೆ ಎಂಬಲ್ಲಿ ವ್ಯಕ್ತಿಯ ಸ್ವಾತಂತ್ರ್ಯ ಕೊನೆಯಾಗುತ್ತದೆ ಎಂಬುದೂ ಅಷ್ಟೇ ನಿಜ ಎಂದೂ ಅಭಿಪ್ರಾಯಪಟ್ಟಿತು.

ಪ್ರಕರಣ ಏನು?

ಆದಿತ್ಯನಾಥ ಅವರ ಲಖನೌ ನಿವಾಸದ ಹೊರಭಾಗದಲ್ಲಿ ಮಹಿಳೆಯೊಬ್ಬರು ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡುತ್ತಿದ್ದ ದೃಶ್ಯಗಳನ್ನು ಪ್ರಶಾಂತ್‌ ಅವರು ಟ್ವಿಟರ್‌ ಮತ್ತು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆದಿತ್ಯನಾಥ ಅವರಿಗೆ ಮದುವೆ ಪ್ರಸ್ತಾವ ಕಳುಹಿಸಿದ್ದಾಗಿ ಈ ಸಂದರ್ಭದಲ್ಲಿ ಮಹಿಳೆ ಹೇಳಿದ್ದರು.

ಹಜ್ರತ್‌ಗಂಜ್‌ ಪೊಲೀಸ್‌ ಠಾಣೆಯಲ್ಲಿ ಪ್ರಶಾಂತ್‌ ವಿರುದ್ಧ ಎಫ್‌ಐರ್‌ ದಾಖಲಿಸಲಾಗಿದೆ. ಮುಖ್ಯಮಂತ್ರಿಯ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಅವಹೇಳನಕಾರಿ ವಿಚಾರಗಳನ್ನು ಪೋಸ್ಟ್‌ ಮಾಡಿದ್ದಾರೆ ಎಂದು ಅವರ ಮೇಲೆ ಆರೋಪ ಹೊರಿಸಲಾಗಿದೆ.

***

ದಾಖಲೆಗಳನ್ನು ಪರಿಶೀಲಿಸಿದ್ದೇವೆ. ಇಂತಹ ವಿಚಾರಗಳಲ್ಲಿ ಅಭಿಪ್ರಾಯಗಳು ಭಿನ್ನವಾಗಿರಬಹುದು. ಇದನ್ನು ಪ್ರಕಟಿಸಬಾರದಿತ್ತು. ಆದರೆ, ಅದಕ್ಕೆ ಬಂಧಿಸುವುದು ಅತಿರೇಕ.

– ಸುಪ್ರೀಂ ಕೋರ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.