ADVERTISEMENT

ಕಾಶ್ಮೀರದಲ್ಲಿ ಹಿಮಪಾತ: ವಾಹನ ಸೇರಿದಂತೆ ವಾಯು ಸಂಚಾರ ಸ್ಥಗಿತ

ಪಿಟಿಐ
Published 30 ಜನವರಿ 2023, 7:25 IST
Last Updated 30 ಜನವರಿ 2023, 7:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗಿದೆ. ಬಹುತೇಕ ಪ್ರದೇಶಗಳು ಹಿಮದಿಂದ ಆವೃತ್ತಗೊಂಡಿವೆ. ಇದರಿಂದ ಸೋಮವಾರ ಜನಜೀವನ ಅಸ್ತವ್ಯಸ್ತಗೊಂಡಿದೆ.

ಶ್ರೀನಗರ, ಗುಲ್ಮಾರ್ಗ್, ಪಹಲ್ಗಾಮ್, ಗುರೇಜ್ ಮತ್ತು ಕುಪ್ವಾರ ಜಿಲ್ಲೆಯ ಬಯಲು ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಹಿಮಪಾತವಾಗಿದೆ. ಇದರಿಂದ ರಾಜ್ಯದಲ್ಲಿ ರಸ್ತೆ ಸೇರಿದಂತೆ ವಾಯು ಸಂಚಾರದ ಮೇಲೆ ಪರಿಣಾಮ ಬೀರಿದೆ. ಕಾಶ್ಮೀರವು ಇತರೆ ಪ್ರದೇಶಗಳೊಂದಿಗೆ ಸಂಪರ್ಕ ಕಡಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಮಪಾತ ಮತ್ತು ಭೂಕುಸಿತದಿಂದಾಗಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಬಾರಾಮುಲ್ಲಾ-ಬನಿಹಾಲ್ ಮಾರ್ಗದಲ್ಲಿ ರೈಲು ಹಳಿಗಳ ಮೇಲೆ ಹಿಮ‌ ಶೇಖರಣೆಯಾಗಿದ್ದು, ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ಹಾರಾಟ ರದ್ದು ಪಡಿಸಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.

ADVERTISEMENT

ಜಮ್ಮುವಿನಲ್ಲಿ ಮುಂದಿನ 12 ಗಂಟೆ ಅವಧಿಯಲ್ಲಿ ಭಾರೀ ಹಿಮಪಾತ ಮತ್ತು ಗುಡುಗು ಸಹಿತ ಮಳೆಯಾಗಲಿದೆ. ಕಣಿವೆಯಾದ್ಯಂತ ತಾಪಮಾನವು ಅತ್ಯಂತ ಕನಿಷ್ಠ (0 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ) ಮಟ್ಟಕ್ಕೆ ಕುಸಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕಳೆದ ವರ್ಷ ಡಿಸೆಂಬರ್ 21 ರಂದು ಪ್ರಾರಂಭವಾದ 'ಚಿಲ್ಲೈ-ಕಲನ್' ಚಳಿಗಾಲವು ಇಂದು ಮುಕ್ತಾಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.