ಜೈಪುರ: ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮಂಗಳವಾರ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಕನಿಷ್ಠ 25 ಮಂದಿ ಹೊಸಬರಿಗೆ ಅವಕಾಶ ನೀಡಿರುವುದು ತಳಮಟ್ಟದ ಕಾರ್ಯಕರ್ತರಲ್ಲಿ ಭರವಸೆ ಮೂಡಿಸಿದೆ ಎಂದು ಚುನಾವಣಾ ವಿಶ್ಲೇಷಕರು ಹೇಳುತ್ತಾರೆ.
ನಾಲ್ಕನೇ ಮತ್ತು ಐದನೇ ಪಟ್ಟಿಯಲ್ಲಿ 61 ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದು, 200 ಸ್ಥಾನಗಳ ಪೈಕಿ 156ಕ್ಕೆ ಅಭ್ಯರ್ಥಿಗಳನ್ನು ಘೋಷಿಸಿದೆ.
ಪಟ್ಟಿಯಲ್ಲಿ ಸ್ಥಾನ ಪಡೆದ ಹೊಸಬರಲ್ಲಿ, ಹೆಚ್ಚಿನವರು ಜಿಲ್ಲಾ ಕಾಂಗ್ರೆಸ್ ಸಮಿತಿಗಳಲ್ಲಿ ಒಂದಲ್ಲ ಒಂದು ಹುದ್ದೆ ಹೊಂದಿದ್ದಾರೆ ಮತ್ತು ತಮ್ಮ ಪ್ರದೇಶದಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಬಹುತೇಕರ ವಯಸ್ಸು 40ರ ಅಸುಪಾಸು ಇದೆ.
ಹೊಸಬರ ಪೈಕಿ ಲೋಕೋಪಯೋಗಿ ಇಲಾಖೆಯ ನಿವೃತ್ತ ಸಹಾಯಕ ಎಂಜಿನಿಯರ್ ಮಂಗಿಲಾಲ್ ಮೀನಾ (63) ಹಿರಿಯರು. ಅವರು ಎಸ್‌ಟಿ ಮೀಸಲು ಕ್ಷೇತ್ರವಾದ ರಾಜಗಢ–ಲಕ್ಷಣಗಢದಿಂದ ಸ್ಪರ್ಧಿಸುತ್ತಿದ್ದಾರೆ.
ಕಠೂಮರ್‌ನ 25 ವರ್ಷದ ಕಾನೂನು ಪದವೀಧರೆ ಸಂಜನಾ ಜಾಟವ್ ಕಿರಿಯ ಅಭ್ಯರ್ಥಿ. ಇವರು ಕಾಂಗ್ರೆಸ್ ಜಿಲ್ಲಾ ಪರಿಷತ್ ಸದಸ್ಯೆ ಮತ್ತು ಈ ಪ್ರದೇಶದಲ್ಲಿ ಸಕ್ರಿಯ ಕಾರ್ಯಕರ್ತೆಯಾಗಿದ್ದಾರೆ. ಕಠೂಮರ್‌ನಲ್ಲಿ ಪಕ್ಷ ಮೊದಲ ಬಾರಿಗೆ ಮಹಿಳೆಗೆ ಟಿಕೆಟ್ ನೀಡಿದೆ. ಅವರು ಕ್ಷೇತ್ರದ ಸಾಂಪ್ರದಾಯಿಕ ಜಾಟವ್ ಸಮುದಾಯದ ಮತಗಳನ್ನು ಗಳಿಸುವ ಸಾಧ್ಯತೆಯಿದೆ.
ನಾಸಿರಾಬಾದ್‌ನ ಶಿವಪ್ರಕಾಶ್ ಮತ್ತು ತಿಜಾರಾದ ಇಮ್ರಾನ್ ಖಾನ್ 26 ವರ್ಷ ವಯಸ್ಸಿನವರು. ಪದವೀಧರರಾದ ಶಿವಪ್ರಕಾಶ್ ಅವರು ಯುವ ಕಾಂಗ್ರೆಸ್‌ನಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿದ್ದಾರೆ ಮತ್ತು ಸ್ಥಳೀಯ ರಾಜಕೀಯದಲ್ಲಿ ಉತ್ತಮ ಹಿಡಿತ ಹೊಂದಿದ್ದಾರೆ.
ಬಿಎಸ್‌ಪಿ ತೊರೆದು ಬಂದಿರುವ ಸಿವಿಲ್ ಎಂಜಿನಿಯರ್, ತಿಜಾರದ ಇಮ್ರಾನ್ ಖಾನ್ ಅವರು ಬಿಜೆಪಿಯ ಅಲ್ವರ್ ಸಂಸದ, ಬಾಬಾ ಬಾಲಕನಾಥ್ ವಿರುದ್ಧ ಸ್ಪರ್ಧಿಸಿದ್ದಾರೆ. ಈ ಪ್ರದೇಶದಲ್ಲಿ ಮಿಯೊ ಮತಗಳ ಮೇಲೆ ಕೇಂದ್ರೀಕರಿಸಿದ್ದಾರೆ.
ಪಿಂದ್ವಾರಾ-ಅಬು ರಸ್ತೆಯ ಲೀಲಾರಾಮ್ ಗರಾಸಿಯಾ (40), ಅಜ್ಮೀರ್ ದಕ್ಷಿಣದ ದ್ರೌಪದಿ ಕೋಲಿ (55), ಮನೋಹರಥಾನದ ನೇಮಿಚಂದ್ ಮೀನಾ (32), ಹಿಂಡನ್ ನ ಅನಿತಾ ಜಾಟವ್ (33), ರಮೀಳಾ ಮೇಘವಾಲ್ (33), ಅಂಕುರ್ ಮಗ್ಲಾನಿ, ಶ್ರೀಗನಾಗನಗರದ 44, ಬದ್ರಿ ಜಾಟ್, ಬಡಿ ಸದ್ರಿಯ 41, ಸಂಗೋಡ್ ನ ಭಾನುಪರತ್ ಸಿಂಗ್, ಸಂಗೋಡ್ ನ 41, ಭಾನುಪರತ್ ಸಿಂಗ್ ಸೇರಿದಂತೆ ಇತರರು ಇದ್ದಾರೆ. ಇವರೆಲ್ಲರೂ ಪಕ್ಷದ ಸದಸ್ಯರು ಅಥವಾ ಯುವ ಕಾಂಗ್ರೆಸ್ ಅಥವಾ ಎನ್‌ಎಸ್‌ಯುಐ ಸದಸ್ಯರಾಗಿದ್ದಾರೆ.
‘ಪಕ್ಷ ಬಿಡುಗಡೆ ಮಾಡಿದ ಈ ಎರಡು ಪಟ್ಟಿಗಳು ಸಮತೋಲನದಿಂದ ಕೂಡಿರುವಂತೆ ತೋರುತ್ತವೆ ಮತ್ತು ರಾಜಕೀಯ ಸೇರಲು ಬಯಸುವ ಯುವಜನರಿಗೆ ಭರವಸೆ ನೀಡುತ್ತವೆ. ಕ್ಷೇತ್ರದ ಕಾರ್ಯಕರ್ತರಿಗೆ ಪ್ರಾಮುಖ್ಯತೆ ನೀಡಲಾಗಿದೆ' ಎಂದು ಚುನಾವಣಾ ವಿಶ್ಲೇಷಕ ನಾರಾಯಣ್ ಬರೇತ್ 'ಪ್ರಜಾವಾಣಿ'ಗೆ ತಿಳಿಸಿದರು.
ಪ್ರಮುಖ ಅಭ್ಯರ್ಥಿಯೆಂದರೆ ನಗರ ಕ್ಷೇತ್ರ ಉದಯಪುರದ 45 ವರ್ಷದ ಗೌರವ್ ವಲ್ಲಭ್. ಗೌರವ್ ಅವರು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರರೂ ಆಗಿದ್ದಾರೆ.
ಅಜ್ಮೀರ್ ದಕ್ಷಿಣದಿಂದ ದ್ರೌಪದಿ ಕೋಲಿ, ಕಥುಮಾರ್‌ನಿಂದ ರಮೀಳಾ ಮೇಘವಾಲ್ ಜಲೋರ್, ಸಂಜನಾ ಜಾಟವ್, ಭೋಪಾಲ್‌ಗಢದಿಂದ ಗೀತಾ ಬಾರ್ವಾರ್, ಹಿಂಡನ್ ನಿಂದ ಅನಿತಾ ಜಾಟವ್– ಈ ಆರು ಹೊಸ ಮಹಿಳಾ ಅಭ್ಯರ್ಥಿಗಳ ಮೇಲೆ ಕಾಂಗ್ರೆಸ್ ಭರವಸೆ ಇಟ್ಟಿದೆ. ಎಸ್‌ಸಿ ಪ್ರಾಬಲ್ಯದ ಅನುಪಗಢ ಕ್ಷೇತ್ರದಿಂದ ಶಿಮ್ಲಾ ನಾಯಕ್ ಅವರು ಕಾಂಗ್ರೆಸ್ ಮೊದಲ ಬಾರಿಗೆ ಮಹಿಳೆಗೆ ಟಿಕೆಟ್ ನೀಡಿದೆ.
ಈ ಹಿಂದೆ ಸಾರ್ವಜನಿಕ ಜೀವನದಲ್ಲಿ ಇಲ್ಲದ ಧಾರ್ಮಿಕ ಬಾಬಾಗಳು, ಅಧಿಕಾರಿಗಳು, ಉದ್ಯಮಿಗಳಂತಹ ಅನೇಕ ರಾಜಕೀಯೇತರರನ್ನು ಪಟ್ಟಿಗಳಲ್ಲಿ ಸೇರಿಸಲಾಗಿದೆ ಎಂದು ಬರೆತ್ ಎಚ್ಚರಿಸಿದ್ದಾರೆ.
‘ಈ ಪ್ರಕ್ರಿಯೆಯಲ್ಲಿ ಅನೇಕ ರಾಜಕೀಯ ತಳಮಟ್ಟದ ಕಾರ್ಯಕರ್ತರನ್ನು ಬದಿಗಿಡಲಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಪ್ರವೃತ್ತಿಯಾಗಿದೆ. ತಳಮಟ್ಟದ ಕಾರ್ಯಕರ್ತರು ಭ್ರಮನಿರಸನಗೊಳ್ಳುತ್ತಾರೆ. ಅವರು ಸೂಕ್ಷ್ಮತೆ, ದೃಷ್ಟಿಕೋನ ಹೊಂದಿದ್ದಾರೆ, ಅವರು ವಿಷಯಾಧಾರಿತ ರಾಜಕೀಯವನ್ನು ಅನುಸರಿಸುತ್ತಾರೆ ಮತ್ತು ಜನರಿಗೆ ಉತ್ತರದಾಯಿಯಾಗಿರುತ್ತಾರೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.