ADVERTISEMENT

ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಭಕ್ತರ ಸಂಖ್ಯೆ 5000ಕ್ಕೆ ಹೆಚ್ಚಳ

ಅರ್ಜುನ್ ರಘುನಾಥ್
Published 19 ಡಿಸೆಂಬರ್ 2020, 6:22 IST
Last Updated 19 ಡಿಸೆಂಬರ್ 2020, 6:22 IST
ಶಬರಿಮಲೆ
ಶಬರಿಮಲೆ   

ತಿರುವನಂತಪುರ (ಕೇರಳ): ಡಿಸೆಂಬರ್ 20ರಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವರ ಸನ್ನಿಧಿಗೆ ತೀರ್ಥಯಾತ್ರೆಗೆ ತೆರಳುವ ಭಕ್ತರ ಸಂಖ್ಯೆಯನ್ನು 5000ದ ವರೆಗೆ ಹೆಚ್ಚಿಸಿ ಕೇರಳ ಹೈಕೋರ್ಟ್ ಆದೇಶ ಹೊರಡಿಸಿದೆ.

ಶಮರಿಮಲೆಯಲ್ಲಿ ವಿಧಿಸಲಾಗಿರುವ ನಿರ್ಬಂಧಗಳ ಕುರಿತಾಗಿ ಅರ್ಜಿಗಳನ್ನು ಪರಿಗಣಿಸಿರುವ ಹೈಕೋರ್ಟ್, ನಿಲಕ್ಕಲ್ ತಲುಪುವ ಮುನ್ನ 48 ಗಂಟೆಗಳ ಒಳಗಡೆ ಆರ್‌ಟಿಪಿಸಿಆರ್ ಪರೀಕ್ಷೆಯ ಆಧಾರದಲ್ಲಿ ಕೋವಿಡ್-19 ನೆಗೆಟಿವ್ ಪ್ರಮಾಣಪತ್ರವನ್ನು ಡಿಸೆಂಬರ್ 30ರಿಂದ ಕಡ್ಡಾಯಗೊಳಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಿತ್ತು.

ಶಮರಿಮಲೆಯಲ್ಲಿ ದೈನಂದಿನ ತೀರ್ಥಯಾತ್ರಿಕರ ಸಂಖ್ಯೆಯನ್ನು ಆರಂಭದಲ್ಲಿ ವಾರದ ದಿನಗಳಲ್ಲಿ 1000 ಹಾಗೂ ವಾರಾಂತ್ಯದಲ್ಲಿ 2000 ಎಂದು ನಿಗದಿಪಡಿಸಲಾಗಿತ್ತು. ಬಳಿಕ ದೇವಸ್ಥಾನದಿಂದ ಬರುವ ಆದಾಯದಲ್ಲಿ ತೀವ್ರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ದೇವಾಲಯವನ್ನು ನಿರ್ವಹಿಸುವ ತಿರುವಾಂಕೂರು ದೇವಸ್ವಂ ಮಂಡಳಿ ಮನವಿಯನ್ನು ಪರಿಗಣಿಸಿ ಭಕ್ತರ ಸಂಖ್ಯೆಯನ್ನು ಕ್ರಮವಾಗಿ 2000 ಹಾಗೂ 3000ಕ್ಕೆ ಹೆಚ್ಚಿಸಲಾಯಿತು.

ADVERTISEMENT

ಡಿಸೆಂಬರ್ 26ರಂದು ಮಂಡಲ ಪೂಜೆಯ ಬಳಿಕ ಭಕ್ತರು ಹಾಗೂ ಸಿಬ್ಬಂದಿಗಳಿಗೆ ಆರ್‌ಟಿಪಿಸಿಆರ್ ಪರೀಕ್ಷೆ ಕಡ್ಡಾಯಗೊಳಿಸಲು ರಾಜ್ಯ ಸರಕಾರ ನಿರ್ಧರಿಸಿತ್ತು.

ನವೆಂಬರ್ 16ರಿಂದ ತೀರ್ಥಯಾತ್ರೆ ಆರಂಭವಾದ ಬಳಿಕ ಇದುವರೆಗೆ 300ಕ್ಕೂ ಹೆಚ್ಚು ಮಂದಿಗೆ (ಸಿಬ್ಬಂದಿ, ಪೊಲೀಸ್ ಸೇರಿದಂತೆ) ಕೋವಿಡ್-19 ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ ಮಾನದಂಡಗಳನ್ನು ಕಟ್ಟುನಿಟ್ಟುಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.