ADVERTISEMENT

ಚುನಾವಣಾ ಬಾಂಡ್‌ | ‘ಲಾಟರಿ ಕಿಂಗ್’ ಆಗಿ ಬೆಳೆದ ಕಾರ್ಮಿಕ ಸ್ಯಾಂಟಿಯಾಗೊ ಮಾರ್ಟಿನ್‌

ಪಿಟಿಐ
Published 15 ಮಾರ್ಚ್ 2024, 14:37 IST
Last Updated 15 ಮಾರ್ಚ್ 2024, 14:37 IST
<div class="paragraphs"><p>Credit: Martin Charitable Trust</p></div>
   

Credit: Martin Charitable Trust

ಚೆನ್ನೈ: ಚುನಾವಣಾ ಬಾಂಡ್‌ ಮೂಲಕ ದೇಣಿಗೆ ನೀಡಿದ ಸಂಸ್ಥೆಗಳ ಹೆಸರು ಬಹಿರಂಗವಾದ ಹಿಂದೆಯೇ ಚರ್ಚೆಗೆ ಬಂದಿರುವ ಹೆಸರು ಸ್ಯಾಂಟಿಯಾಗೊ ಮಾರ್ಟಿನ್‌. ಇವರು ಗರಿಷ್ಠ ದೇಣಿಗೆ ನೀಡಿದ ಫ್ಯೂಚರ್ ಗೇಮ್ಸ್ ಅಂಡ್ ಹೋಟೆಲ್‌ ಸರ್ವೀಸಸ್‌ ಕಂಪನಿಯ ಸ್ಥಾಪಕ ಮತ್ತು ಮಾಲೀಕ.

ಯಾರಿದು ಮಾರ್ಟಿನ್?. ಅವರ ವಹಿವಾಟಿನ ಸ್ವರೂಪವೇನು?:

ಕಾರ್ಮಿಕನ ಸ್ಥಾನದಿಂದ ‘ಲಾಟರಿ ಕಿಂಗ್‘ ಆಗುವವರೆಗೆ ಅವರು ‘ಸವೆಸಿದ’ ಹಾದಿಯೇ ಭಿನ್ನ. ಮಾರ್ಟಿನ್‌ ತಮಿಳುನಾಡಿನ ಕೊಯಮತ್ತೂರು ಮೂಲದವರು. ಆರಂಭದಲ್ಲಿ ಸಾಮಾನ್ಯ ಕಾರ್ಮಿಕ. 

ADVERTISEMENT

ತಮಿಳುನಾಡಿನಲ್ಲಿ ಲಾಟರಿ ವಹಿವಾಟನ್ನು 2003ರಲ್ಲೇ ನಿಷೇಧಿಸಲಾಗಿದೆ. ಆದರೆ, ಈಗಲೂ ತಮಿಳುನಾಡಿನ ಬಹುತೇಕ ಜನರು ಮರೆಯದ ಹೆಸರು ‘ಮಾರ್ಟಿನ್‌ ಲಾಟರಿ’. ಹಲವು ನಕಾರಾತ್ಮಕ ಕಾರಣಗಳಿಗಾಗಿಯೇ ಈ ಹೆಸರು ನೆನಪಿನಲ್ಲಿದೆ ಎಂಬುದು ಗಮನಾರ್ಹ. 

ಮಾರ್ಟಿನ್‌ ನಡೆಸುತ್ತಿದ್ದ ಕಾಲೇಜೊಂದರಲ್ಲಿ ಅಕೌಂಟೆಂಟ್‌ ಆಗಿದ್ದವರೊಬ್ಬರು ಆದಾಯ ತೆರಿಗೆ ಇಲಾಖೆಯ ದಾಳಿ ಬಳಿಕ ಶಂಕಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಇವರ ‘ಫ್ಯೂಚರ್ ಗೇಮಿಂಗ್‌ ಸಲ್ಯೂಷನ್ಸ್’, ಸಿಕ್ಕಿಂ ಲಾಟರಿಗಳ ಪ್ರಮುಖ ವಿತರಕ ಸಂಸ್ಥೆಯಾಗಿತ್ತು. ಸುದೀರ್ಘ ಕಾಲ ಲಾಟರಿ ವಹಿವಾಟು ನಡೆಸಿದ ಮಾರ್ಟಿನ್, ಕೇರಳ ಮತ್ತು ತಮಿಳುನಾಡಿನಲ್ಲಿ ಹಲವು ರಾಜಕೀಯ ಪ್ರಮುಖರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.

ಜಾರಿ ನಿರ್ದೇಶನಾಲಯ (ಇ.ಡಿ), ಆದಾಯ ತೆರಿಗೆ ಇಲಾಖೆಯು ಇವರ ವಹಿವಾಟು ಕುರಿತು ತನಿಖೆ ಆರಂಭಿಸಿದ್ದವು. 2023ರಲ್ಲಿ ಇ.ಡಿಯು ಸುಮಾರು ₹ 457 ಕೋಟಿ ಮೊತ್ತದ ಆಸ್ತಿಯನ್ನು ಜಪ್ತಿ ಮಾಡಿತ್ತು. ಕೇರಳದಲ್ಲಿ ನಕಲಿ ಲಾಟರಿಗಳ ಮಾರಾಟದ ಮೂಲಕ ಸಿಕ್ಕಿಂ ರಾಜ್ಯ ಸರ್ಕಾರಕ್ಕೆ ಸುಮಾರು ₹ 900 ಕೋಟಿ ನಷ್ಟ ಉಂಟು ಮಾಡಿದ ಪ್ರಕರಣದಲ್ಲಿ ಈ ಆಸ್ತಿಯನ್ನು ಇ.ಡಿ ಜಪ್ತಿ ಮಾಡಿತ್ತು. 

ಇದೇ ಪ್ರಕರಣ ಸಂಬಂಧ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿ ಮಾರ್ಟಿನ್ ಮತ್ತು ಇತರರ ವಿರುದ್ಧ ಸಿಬಿಐ ಆರೋಪಪಟ್ಟಿ ದಾಖಲಿಸಿತ್ತು.

ತಮಿಳುನಾಡಿನಲ್ಲಿ ಮಾರ್ಟಿನ್‌ನ ಅಳಿಯ ಆಧವ್‌ ಅರ್ಜುನ ಅವರಿಗೆ ಸೇರಿದ್ದ ವಿವಿಧ ಸ್ಥಳಗಳ ಮೇಲೆ ಅಕ್ರಮ ಮರಳು ಕಳ್ಳಸಾಗಣೆ ಪ್ರಕರಣದ ಸಂಬಂಧ ದಾಳಿ ನಡೆದಿತ್ತು. ಭಾರತೀಯ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್‌ ಅಧ್ಯಕ್ಷರಾಗಿದ್ದ ಅರ್ಜುನ ಅವರನ್ನು ಇತ್ತೀಚೆಗೆ ತಮಿಳುನಾಡಿನ ವಿಡುತಲೈ ಚಿರುತ್ತೈಗಲ್ ಕಾಟ್ಚಿ ಸಂಘಟನೆಯ ಉಪ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.