ADVERTISEMENT

ಉತ್ತರ ಪ್ರದೇಶ ಕೋವಿಡ್–19 ಲಾಕ್‌ಡೌನ್ ಸಹಾಯವಾಣಿ:ರಸಗುಲ್ಲ, ಗುಟ್ಕ, ಸಮೋಸಾ ಕರೆಗಳು

ಏಜೆನ್ಸೀಸ್
Published 18 ಏಪ್ರಿಲ್ 2020, 9:28 IST
Last Updated 18 ಏಪ್ರಿಲ್ 2020, 9:28 IST
ಸಹಾಯವಾಣಿಗೆ ಕರೆ– ಸಾಂಕೇತಿಕ ಚಿತ್ರ
ಸಹಾಯವಾಣಿಗೆ ಕರೆ– ಸಾಂಕೇತಿಕ ಚಿತ್ರ   

ಲಖನೌ: ಕೊರೊನಾ ವೈರಸ್‌ ಸಾಂಕ್ರಾಮಿಕ ನಿಯಂತ್ರಿಸಲು ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಜನರಿಗೆ ಅನುವಾಗಲು ಸರ್ಕಾರಗಳು ಸಹಾಯವಾಣಿ ಆರಂಭಿಸಿವೆ. ಅಲ್ಲಿಗೆ ಔಷಧ ತುರ್ತು ಸಂಬಂಧಿಸಿದ ಕರೆಗಳ ಜೊತೆಗೆ ರಸಗುಲ್ಲ, ಸಮೋಸ, ಪಾನ್‌ ಮತ್ತು ಗುಟ್ಕಾ ಪೂರೈಕೆಗೂ ಬೇಡಿಕೆಗಳು ಬರುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿಗಳ ಸಹಾಯವಾಣಿ ಸಂಖ್ಯೆ 1076ಕ್ಕೆ ಎಲ್ಲ ರೀತಿಯ ಕರೆಗಳೂ ಬರುತ್ತಿವೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ರಾಮ್‌ ರತನ್‌ ಪಾಲ್‌ ಎಂಬುವವರು ಅಗತ್ಯ ಔಷಧಿಗಳಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು. ಕೂಡಲೇ ಕಾರ್ಯಪ್ರೌವೃತ್ತರಾದ ಅಧಿಕಾರಿಗಳು ಲಖನೌನಲ್ಲಿರುವ ಅವರ ನಿವಾಸಕ್ಕೆ ಔಷಧಿ ಪೂರೈಸಲು ಕ್ರಮವಹಿಸಲಾಯಿತು.

ಗೌತಮ್‌ ಬುದ್ಧ ನಗರ ಜಿಲ್ಲೆಯಿಂದ ಶಂಕರ್‌ ಸಿಂಗ್‌ ಎಂಬ ವ್ಯಕ್ತಿ ಆಹಾರ ಪದಾರ್ಥಗಳಿಗಾಗಿ ಕರೆ ಮಾಡಿದ್ದರು. ರೇಷನ್‌ ಅವರ ಮನೆ ಬಾಗಿಲಿಗೆ ತಲುಪಿಸಲಾಯಿತು. ಸುಮಾರು 1 ಲಕ್ಷ ಜನರಿಗೆ ಮುಖ್ಯಮಂತ್ರಿಗಳ ಸಹಾಯವಾಣಿಯಿಂದ ಸಹಾಯ ದೊರೆತಿದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಉತ್ತರ ಪ್ರದೇಶ ಪೊಲೀಸ್‌ ಸಹಾಯವಾಣಿಗೆ ಇತ್ತೀಚೆಗೆ ಹಿರಿಯ ವ್ಯಕ್ತಿಯೊಬ್ಬರು ಕರೆ ಮಾಡಿ 'ತುರ್ತು ಸಹಾಯ' ನೀಡುವಂತೆ ಕೇಳಿ, ರಸಗುಲ್ಲ ತಂದುಕೊಡುವಂತೆ ಬೇಡಿಕೆ ಇಟ್ಟರು. ಅದೊಂದು ಹುಡುಗಾಟದ ಕರೆ ಇರಬಹುದೆಂದು ತಿಳಿದಿದ್ದೆವು. ಆದರೆ, ಸ್ವಯಂ ಸೇವಕರು ಲಖನೌದ ಹಜರತ್‌ಗಂಜ್‌ನಲ್ಲಿರುವ ನಿವಾಸಕ್ಕೆ ಸಿಹಿ ತಿನಿಸನ್ನು ನೀಡಲು ಹೋದಾಗ ಅವರು ಸುಮಾರು 80 ವರ್ಷ ವಯಸ್ಸಿನ ವ್ಯಕ್ತಿ ಎಂಬುದು ತಿಳಿಯಿತು. ರಸಗುಲ್ಲಕ್ಕಾಗಿ ಅವರು ಎದುರು ನೋಡುತ್ತಿದ್ದರು.

ಅವರು ಮಧುಮೇಹದಿಂದ ಬಳಲುತ್ತಿದ್ದರು ಹಾಗೂ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿತ್ತು.

ವರದಿಯ ಪ್ರಕಾರ ಬರುವ ಬೇಡಿಕೆಗಳಲ್ಲಿ ಬಹುತೇಕ ತುರ್ತು ಕರೆಗಳಾಗಿರುವುದಿಲ್ಲ. ವೀಳ್ಯದೆಲೆ, ಗುಟ್ಕಾ ಹಾಗೂ ಬಿಸಿ ಸಮೋಸಾ (ಚಟ್ನಿ ಜೊತೆಗೆ) ಎಂಬ ಬೇಡಿಕೆಗಳೂ ಬರುತ್ತವೆ. ಬೇಡಿಕೆಯಂತೆ ಸಮೋಸಾ ಪೂರೈಸಲಾಯಿತು. ಅದರ ಜೊತೆಗೆ ಕರೆ ಮಾಡಿದ ವ್ಯಕ್ತಿಯಿಂದ ಚರಂಡಿ ಸ್ವಚ್ಛಗೊಳಿಸುವ ಕೆಲಸವನ್ನೂ ಮಾಡಿಸಲಾಗಿದೆ.

ರಾಮ್‌ಪುರದಲ್ಲಿ ಪಿಜ್ಜಾ ಮತ್ತು ಮದ್ಯ ತಂದು ಕೊಡುವಂತೆಯೂ ಕರೆಗಳು ಬಂದಿವೆ. ಜಿಲ್ಲಾಡಳಿತ ಅಂತಹ ವ್ಯಕ್ತಿಗಳಿಗೆ ಹಲವು ಕೆಲಸಗಳಿಗೆ ನಿಯೋಜಿಸುವ ಮೂಲಕ ಶಿಕ್ಷಿಸಿದೆ. ಇನ್ನೂ ಮನೆಗಳಿಂದ ಮಕ್ಕಳು 'ಪೊಲೀಸ್‌ ಅಂಕಲ್‌'ಗಳಲ್ಲಿ ಚಿಪ್ಸ್‌, ಕೇಕ್‌ಗಳು, ಐಸ್‌ಕ್ರೀಂ ಹಾಗೂ ಪಿಜ್ಜಾಗಳಿಗೆ ಬೇಡಿಕೆ ಇಡುತ್ತಿದ್ದಾರೆ.

ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿದವರಿಗೆ ಸಾವಿರಾರು ಮಂದಿ ಸಹಾಯ ಮಾಡುತ್ತಿದ್ದಾರೆ. ಆಹಾರ ಮತ್ತು ಔಷಧಗಳನ್ನು ಒದಗಿಸುವ ಕಾರ್ಯ ಮಾಡಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ 35,000 ಪೊಲೀಸ್‌ ರೆಸ್ಪಾನ್ಸ್‌ ವೆಹಿಕಲ್‌ಗಳು (ಪಿಆರ್‌ವಿ) ಕಾರ್ಯನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 1,100 ಪೊಲೀಸ್‌ ಸಿಬ್ಬಂದಿ ಸಹಾಯವಾಣಿ ಕರೆಗಳಿಗೆ ಸಹಕಾರ ನೀಡುತ್ತಿದ್ದಾರೆ. ಗರ್ಭಿಣಿಯರನ್ನು ಆಸ್ಪತ್ರೆ ತಲುಪಿಸುವುದು ಸೇರಿದಂತೆ ಹಲವು ತುರ್ತು ಕಾರ್ಯಗಳನ್ನು ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.