ADVERTISEMENT

ಚಮರೀಮೃಗ ‘ಆಹಾರಕ್ಕಾಗಿ ಬಳಸಬಹುದಾದ ಪ್ರಾಣಿ’: ಎಫ್ಎಸ್‌ಎಸ್ಎಐ ಅನುಮೋದನೆ

ಪಿಟಿಐ
Published 27 ನವೆಂಬರ್ 2022, 12:46 IST
Last Updated 27 ನವೆಂಬರ್ 2022, 12:46 IST
ಚಮರೀಮೃಗ –ಎಎಫ್‌ಪಿ ಚಿತ್ರ
ಚಮರೀಮೃಗ –ಎಎಫ್‌ಪಿ ಚಿತ್ರ   

ಇಟಾನಗರ: ಹಿಮಾಲಯದ ಚಮರೀಮೃಗವನ್ನು (ಯಾಕ್‌) ‘ಆಹಾರಕ್ಕಾಗಿ ಬಳಸಬಹುದಾದ ಪ್ರಾಣಿ’ ಎಂದು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (ಎಫ್ಎಸ್‌ಎಸ್ಎಐ) ಅನುಮೋದಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಮರೀಮೃಗಗಳ ಹಾಲು ಮತ್ತು ಮಾಂಸವನ್ನು ಬಳಕೆ ಮಾಡಬಹುದಾಗಿರುವುದರಿಂದ ಇನ್ನು ಜನರು ಹೆಚ್ಚಿನ ಸಂಖ್ಯೆಯಲ್ಲಿ ಇವುಗಳ ಸಾಕಣೆಯಲ್ಲಿ ತೊಡಗುವ ಸಾಧ್ಯತೆ ಇದೆ. ಇದರಿಂದ ಅವುಗಳ ಸಂಖ್ಯೆ ವೃದ್ಧಿಯಾಗಲಿದೆ ಎಂದು ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್‌ ಜಿಲ್ಲೆಯ ದಿರಂಗ್‌ನಲ್ಲಿರುವ ಯಾಕ್‌ ಕುರಿತ ರಾಷ್ಟ್ರೀಯ ಸಂಶೋಧನಾ ಕೇಂದ್ರ (ಎನ್‌ಆರ್‌ಸಿ) ಹೇಳಿದೆ.

ಚಮರೀಮೃಗವನ್ನು ‘ಆಹಾರಕ್ಕಾಗಿ ಬಳಸಬಹುದಾದ ಪ್ರಾಣಿ’ಯಾಗಿ ಅನುಮೋದಿಸಬೇಕೆಂದು ಕೋರಿ ಎನ್‌ಆರ್‌ಸಿ–ಯಾಕ್‌ 2021ರಲ್ಲಿ ಎಫ್ಎಸ್‌ಎಸ್ಎಐಗೆ ಪ್ರಸ್ತಾವ ಸಲ್ಲಿಸಿತ್ತು. ಹಿಮಾಲಯ ಪ್ರದೇಶದ ಪಶುಪಾಲಕ ಅಲೆಮಾರಿಗಳು ಚಮರೀಮೃಗಳನ್ನು ಕೃಷಿ ಚಟುವಟಿಕೆಗಳಿಗೂ ಬಳಸುತ್ತಾರೆ.

ADVERTISEMENT

ಎಫ್ಎಸ್‌ಎಸ್ಎಐ ಅನುಮೋದನೆಯಿಂದ ಇನ್ನು ಮುಂದೆ ರೈತರಿಗೆ ಆರ್ಥಿಕವಾಗಿಯೂ ಅನುಕೂಲವಾಗಲಿದೆ ಎಂದು ಎನ್‌ಆರ್‌ಸಿ–ಯಾಕ್‌ ನಿರ್ದೇಶಕ ಡಾ. ಮಿಹಿರ್‌ ಸರ್ಕಾರ್‌ ತಿಳಿಸಿದ್ದಾರೆ. ದೇಶದಲ್ಲಿ ಚಮರೀಮೃಗಗಳ ಸಂಖ್ಯೆ ಕುಸಿಯುತ್ತಿದೆ ಎಂದೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.