ADVERTISEMENT

ಆಹಾರ ಕಲಬೆರಕೆಗೆ ಕಾದಿದೆ ಕಠಿಣ ಶಿಕ್ಷೆ

₹10 ಲಕ್ಷದವರೆಗೆ ದಂಡ

ಪಿಟಿಐ
Published 26 ಜೂನ್ 2018, 19:52 IST
Last Updated 26 ಜೂನ್ 2018, 19:52 IST
   

ನವದೆಹಲಿ: ಆಹಾರ ಪದಾರ್ಥ ಕಲಬೆರಕೆಗೆ ಇನ್ನು ಮುಂದೆ ಕಠಿಣ ಶಿಕ್ಷೆ ಕಾದಿದೆ. ಹೊಸ ಕಾನೂನು ಜಾರಿಯಾದರೆ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ₹10 ಲಕ್ಷದವರೆಗೆ ದಂಡ ವಿಧಿಸಲು ಅವಕಾಶವಿದೆ.

ಕಲಬೆರಕೆ ಹಾವಳಿಗೆ ಕಡಿವಾಣ ಹಾಕಲು ಸುಪ್ರೀಂ ಕೋರ್ಟ್‌ ಸೂಚನೆಯಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್ಎಸ್‌ಎಸ್‌ಎಐ) 2006ರ ಆಹಾರ ಸುರಕ್ಷತೆ ಕಾನೂನಿಗೆ ತಿದ್ದುಪಡಿ ತರಲು ಹೊರಟಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾನೂನು ಕರಡು ತಿದ್ದುಪಡಿ ಪ್ರಸ್ತಾವವನ್ನು ಪ್ರಾಧಿಕಾರ ಈಗಾಗಲೇ ಸಿದ್ಧಪಡಿಸಿದ್ದು, ಜುಲೈ 2ರಿಂದ ಸಾರ್ವಜನಿಕರಿಂದ ಅಹವಾಲು ಆಹ್ವಾನಿಸಿದೆ.

ADVERTISEMENT

ಸಿಂಗಪುರದ ಆಹಾರ ಮಾರಾಟ ಕಾಯ್ದೆಯನ್ನು ಮಾದರಿಯಾಗಿಟ್ಟುಕೊಂಡು ಪ್ರಾಧಿಕಾರವು ಜಾರಿಯಲ್ಲಿರುವ ಕಾನೂನಿಗೆ ನೂರು ತಿದ್ದುಪಡಿಗಳನ್ನು ಶಿಫಾರಸು ಮಾಡಿದೆ.

ಸಂಸತ್‌ ಅನುಮೋದನೆಗೆ ಕಾದಿರುವ ಹೊಸ ’ಗ್ರಾಹಕರ ರಕ್ಷಣಾ ಮಸೂದೆ’ಯಲ್ಲಿ ಕೂಡ ಕಲಬೆರಕೆ ಕೃತ್ಯಕ್ಕೆ ಇದೇ ರೀತಿಯ ಕಠಿಣ ಶಿಕ್ಷೆ ವಿಧಿಸಲು ಶಿಫಾರಸು ಮಾಡಲಾಗಿದೆ.

ಕರಡು ತಿದ್ದುಪಡಿ ಪ್ರಸ್ತಾವನೆ

* ಕನಿಷ್ಠ ಏಳು ವರ್ಷ ಜೈಲು ಶಿಕ್ಷೆಯನ್ನು ಜೀವ ಇರುವವರೆಗೂ ಜೈಲು ಶಿಕ್ಷೆಯಾಗಿ ಮಾರ್ಪಡಿಸಲು ಅವಕಾಶ.

*ಕಲಬೆರಕೆಯಿಂದ ಜನರ ಆರೋಗ್ಯದ ಮೇಲೆ ಯಾವ ದುಷ್ಪರಿಣಾಮವಾಗದಿದ್ದರೂ ಆರೋಪ ಸಾಬೀತಾದರೆ ಸಾಕು ಶಿಕ್ಷೆ ತಪ್ಪಿದ್ದಲ್ಲ.

* ಪರಿಣಾಮಕಾರಿ ಕಾನೂನು ಜಾರಿಗೆ ರಾಜ್ಯ ಮಟ್ಟದಲ್ಲಿ ಆಹಾರ ಸುರಕ್ಷತೆ ಪ್ರಾಧಿಕಾರ ರಚನೆಗೆ ಶಿಫಾರಸು

* ಆಹಾರ ಸುರಕ್ಷತೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸುವ, ಹಲ್ಲೆ ಮಾಡುವ ಮತ್ತು ಬೆದರಿಕೆ ಒಡ್ಡುವವರಿಗೆ ಶಿಕ್ಷೆ ಮತ್ತು ದಂಡದ ಪ್ರಮಾಣ ಹೆಚ್ಚಿಸುವಂತೆ ಸಲಹೆ

*ಸದ್ಯದ ₹1 ಲಕ್ಷದವರೆಗಿನ ದಂಡವನ್ನು ₹5ಲಕ್ಷದವರೆಗೆ ಮತ್ತು ಮೂರು ತಿಂಗಳ ಶಿಕ್ಷೆಯ ಪ್ರಮಾಣವನ್ನು ಆರು ತಿಂಗಳಿಗೆ ಏರಿಸಲು ಮನವಿ

* ಕಲಬೆರಕೆ ಆಹಾರ ಪದಾರ್ಥಗಳ ಪರೀಕ್ಷೆ, ಪ್ರಯೋಗಾಲಯ ಮತ್ತು ನ್ಯಾಯಾಲಯ ವೆಚ್ಚ ಸೇರಿದಂತೆ ಇನ್ನಿತರ ಎಲ್ಲ ವೆಚ್ಚಗಳನ್ನೂ ಅಪರಾಧಿಯೇ ಭರಿಸಬೇಕು.

* ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಆಹಾರ ಪದಾರ್ಥಗಳ ಜತೆಗೆ ವಿದೇಶಗಳಿಗೆ ರಫ್ತಾಗುವ ಆಹಾರ ಪದಾರ್ಥಗಳಿಗೂ ಕಾನೂನು ಅನ್ವಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.