ADVERTISEMENT

ತೈಲ ಬೆಲೆ ಚರ್ಚೆಗೆ ಪ್ರತಿಪಕ್ಷಗಳ ಪಟ್ಟು, ವಾಗ್ವಾದ; ಸಂಸತ್ ಕಲಾಪ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 12:35 IST
Last Updated 9 ಮಾರ್ಚ್ 2021, 12:35 IST
ಸಂಸತ್ ಭವನ
ಸಂಸತ್ ಭವನ   

ನವದೆಹಲಿ: ಇಂಧನ ದರ ಏರಿಕೆಯ ವಿಷಯ ಸತತ ಎರಡನೇ ದಿನವೂ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಧ್ವನಿಸಿದ್ದು, ಬಿಸಿ ಚರ್ಚೆಗೆ ಕಾರಣವಾಯಿತು. ಕಲಾಪ ಪಟ್ಟಿಯನ್ನು ಕೈಬಿಟ್ಟು ಈ ಬಗ್ಗೆ ತುರ್ತು ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ವಿರೋಧಪಕ್ಷಗಳು ಪಟ್ಟುಹಿಡಿದವು. ಸ್ಪೀಕರ್‌ ಇದಕ್ಕೆ ಒಪ್ಪದಿರುವುದು ವಾಗ್ವಾದಕ್ಕೆ ಕಾರಣವಾಯಿತು.

ವಾಗ್ವಾದದ ಪರಿಣಾಮ ಉಭಯ ಸದನಗಳಲ್ಲಿಯೂ ಕೆಲ ಬಾರಿ ಕಲಾಪವನ್ನು ಮುಂದೂಡಲಾಯಿತು. ರಾಜ್ಯಸಭೆಯಲ್ಲಿ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ದಿನದ ಕಲಾಪ ಪಟ್ಟಿ ಕೈಬಿಡಲು ಕೋರಿ ನಿಯಮ 267ರಡಿ ನೋಟಿಸ್‌ ನೀಡಿದ್ದರು. ರಾಜ್ಯಸಭೆಯಲ್ಲಿ ವಿರೋಧಪಕ್ಷಗಳ ಸದನದ ನಾಯಕರಾದ ಬಿಎಸ್‌ಪಿಯ ಸತೀಶ್‌ ಚಂದ್ರ ಮಿಶ್ರಾ, ಡಿಎಂಕೆಯ ತಿರುಚಿ ಶಿವ, ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ ಅವರು ಕೂಡ ನೋಟಿಸ್ ನೀಡಿದ್ದರು.

ಉಪ ಸಭಾಪತಿ ಹರಿವಂಶ್ ಚರ್ಚೆಗೆ ಅವಕಾಶ ಕಲ್ಪಿಸದೇ ತಿರಸ್ಕರಿಸಿದರು. ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು ಸೋಮವಾರವೇ ಇಂಥದೇ ನೋಟಿಸ್‌ ತಿರಸ್ಕರಿಸಿದ್ದಾರೆ. ಅಧ್ಯಕ್ಷರ ಸಮ್ಮತಿಯಿಲ್ಲದೇ ಇದನ್ನು ಒಪ್ಪಲು ಆಗದು ಎಂದೂ ಕಾರಣ ನೀಡಿದರು. ಈ ವಿಷಯ ಮೂರು ಬಾರಿ ಅಲ್ಪಾವಧಿಗೆ ಕಲಾಪವನ್ನು ಮುಂದೂಡಲು ಕಾರಣವಾಯಿತು.

ADVERTISEMENT

ತೈಲ ಬೆಲೆ ಏರಿಕೆ ಪ್ರಸ್ತಾಪಿಸಲು ಸೋಮವಾರವೇ ವಿರೋಧಪಕ್ಷದ ನಾಯಕರಿಗೆ ಅವಕಾಶ ಕಲ್ಪಿಸಲಾಗಿತ್ತು ಎಂದು ಹೇಳಿದ ಉಪಾಧ್ಯಕ್ಷರು, ನಿಗದಿಯಂತೆ ಶೂನ್ಯವೇಳೆಯ ಚರ್ಚೆಗೆ ಅವಕಾಶ ಕಲ್ಪಿಸಲು ಮುಂದಾದರು. ಆಗ ವಿರೋಧಪಕ್ಷದ ಸದಸ್ಯರು ಘೋಷಣೆ ಕೂಗಿದ್ದು, ಗೊಂದಲ ಉಂಟಾಯಿತು. ಅಲ್ಪಾವಧಿಗೆ ಕಲಾಪವನ್ನು ಮುಂದೂಡಲಾಯಿತು.

ಮತ್ತೆ ಸದನ ಸೇರಿದಾಗ ಮಲ್ಲಿಕಾರ್ಜುನ ಖರ್ಗೆ ಅವರು ಮತ್ತೆ ತಮ್ಮ ಬೇಡಿಕೆಯನ್ನು ಪುನುರಚ್ಚರಿಸಿದರು. ಇಂದು ಮತ್ತೆ ಹೊಸದಾಗಿ ನೋಟಿಸ್‌ ನೀಡಲಾಗಿದೆ. ಕೆಲ ಸಂಸದರೂ ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ಕೋರಿದರು. ಉಪಾಧ್ಯಕ್ಷರುಇದಕ್ಕೆ ಸ್ಪಂದಿಸಲಿಲ್ಲ. ವಾಗ್ವಾದ, ಬಿಸಿ ಚರ್ಚೆ ಹೆಚ್ಚಿದಾಗ ಮತ್ತೆ ಕಲಾಪ ಮುಂದೂಡಲಾಯಿತು. ಮಧ್ಯಾಹ್ನ 2 ಗಂಟೆಗೆಮತ್ತೆ ಸದನ ಸೇರಿದ್ದು, ಆಗಲೂ ಇಂಥದೇ ಸ್ಥಿತಿ ಇತ್ತು. ಆಗ ಅನಿವಾರ್ಯವಾಗಿ ಉಪಾಧ್ಯಕ್ಷರುದಿನದ ಮಟ್ಟಿಗೆ ಕಲಾಪ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.