ADVERTISEMENT

ಮತ್ತೆ ಏರಿತು ಪೆಟ್ರೋಲ್‌, ಡೀಸೆಲ್‌ ದರ: ನಿಯಂತ್ರಣ ಕ್ರಮಕ್ಕೆ ಜನರ ಒತ್ತಾಯ

ಏಜೆನ್ಸೀಸ್
Published 9 ಸೆಪ್ಟೆಂಬರ್ 2018, 8:49 IST
Last Updated 9 ಸೆಪ್ಟೆಂಬರ್ 2018, 8:49 IST
ಪೆಟ್ರೋಲ್‌–ಡೀಸೆಲ್‌ ದರ ಏರಿಕೆ
ಪೆಟ್ರೋಲ್‌–ಡೀಸೆಲ್‌ ದರ ಏರಿಕೆ   

ನವದೆಹಲಿ: ತೈಲ ದರ ಏರಿಕೆ ಖಂಡಿಸಿ ಕಾಂಗ್ರೆಸ್‌ ಪಕ್ಷ ಸೋಮವಾರ ಭಾರತ್‌ ಬಂದ್‌ಗೆ ಕರೆ ನೀಡಿದ್ದು,ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದೆ. ಮತ್ತೊಂದೆಡೆ ಭಾನುವಾರವೂ ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಏರಿಕೆಯಾಗಿದೆ.

ಮುಂಬೈ ಜನರಿಗೆ ತೈಲ ದರ ಏರಿಕೆಯ ಬಿಸಿ ಅತಿ ಹೆಚ್ಚು ತಟ್ಟಿದೆ. ಪ್ರಸ್ತುತ ಅಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ₹87.89 ಮತ್ತು ಡೀಸೆಲ್‌ ₹77.09 ತಲುಪಿದೆ. ದೆಹಲಿಯಲ್ಲಿ ಶನಿವಾರದಿಂದ ಭಾನುವಾರಕ್ಕೆ 12 ಪೈಸೆಯಷ್ಟು ಏರಿಕೆಯಾಗಿದ್ದು,ಚಿಲ್ಲರೆ ಮಾರಾಟ ದರ ಒಂದು ಲೀಟರ್‌ ಪೆಟ್ರೋಲ್‌ ₹80.50 ಮತ್ತು ಡೀಸೆಲ್‌ ₹ 72.61 ಆಗಿದೆ. ಇನ್ನೂ ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ₹83ರ ಗಡಿ ದಾಟಿದೆ.

ನಿತ್ಯವೂ ತೈಲ ದರ ಏರಿಕೆ ಕಾಣುತ್ತಿದ್ದು, ಇದರಿಂದ ಸಾಮಾನ್ಯ ಜನರು ಪರಿಣಾಮ ಅನುಭವಿಸುತ್ತಿದ್ದಾರೆ. ತೈಲ ದರ ನಿಯಂತ್ರಿಸಲು ಕೇಂದ್ರ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕಾಗಿ ಜನಸಾಮಾನ್ಯರು ಒತ್ತಾಯಿಸುತ್ತಿದ್ದಾರೆ.

ADVERTISEMENT

ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯು ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆಗೆ ಕಾರಣವಾಗಿದೆ ಎಂದು ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿದೆ.

ಆದರೆ, ತೈಲ ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಾವುದೇ ಕ್ರಮವಹಿಸಲು ವಿಫಲವಾಗಿದೆ ಎಂದು ಆರೋಪಿ ಕಾಂಗ್ರೆಸ್‌ ನೇತೃತ್ವದಲ್ಲಿ ಸೋಮವಾರ(ಸೆ.10) ದೇಶವ್ಯಾಪಿ ಬಂದ್‌ ಕರೆ ನೀಡಲಾಗಿದೆ. ಬಂದ್‌ಗೆ ಜೆಡಿಎಸ್‌, ಎಂಡಿಎಂಕೆ, ಎನ್‌ಸಿಪಿ, ಡಿಎಂಕೆ ಹಾಗೂ ಸಮಾಜವಾದಿ ಪಕ್ಷ ಬೆಂಬಲ ಸೂಚಿಸಿವೆ. ತೈಲ ದರ ಏರಿಕೆ, ರೈತರ ಸಮಸ್ಯೆ ಹಾಗೂ ನಿರುದ್ಯೋಗ ಸಮಸ್ಯೆಗಳನ್ನು ಮುಂದಿಟ್ಟು ಎಡ ಪಕ್ಷಗಳು ಇದೇ ದಿನ ಪ್ರತ್ಯೇಕವಾಗಿ ಬಂದ್‌ಗೆ ಕರೆ ನೀಡಿವೆ.

ಭಾರತ ಶೇ 80ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ ಹಾಗೂ ರೂಪಾಯಿ ಮೌಲ್ಯ ಕುಸಿತದ ಪರಿಣಾಮವಾಗಿ ತೈಲ ದರ ಏರಿಕೆ ಕಂಡಿದೆ. ಈ ವರ್ಷ ಏಪ್ರಿಲ್‌ ಮತ್ತು ಜುಲೈ ನಡುವೆ ಭಾರತ ₹2,64,030 ಕೋಟಿ ಮೌಲ್ಯದ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿರುವುದಾಗಿ ದಿ ಹಿಂದು ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.