ADVERTISEMENT

ಜೋಕೆ, ಐಸಿಯುಗಳೂ ಕಾಯಿಲೆ ಹಬ್ಬಿಸುವ ತಾಣಗಳು!

ಭಾರತೀಯ ವಿಜ್ಞಾನ ಕಾಂಗ್ರೆಸ್‌ನಲ್ಲಿ ವಿಜ್ಞಾನಿಯ ಎಚ್ಚರಿಕೆ

ಎಸ್.ರವಿಪ್ರಕಾಶ್
Published 4 ಜನವರಿ 2019, 20:23 IST
Last Updated 4 ಜನವರಿ 2019, 20:23 IST
ಭವಿಷ್ಯದ ಜನಾಂಗಕ್ಕೆ ಇಂದಿನ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳನ್ನು ಪರಿಚಯಿಸುವ ಉದ್ದೇಶದಿಂದ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ ಕ್ಯಾಂಪಸ್‌ನಲ್ಲಿ ಕ್ಯಾಪ್ಸೂಲ್ ಹುಗಿದಿಡಲಾಯಿತು. ಈ ಸಂದರ್ಭದಲ್ಲಿ ನೊಬೆಲ್ ಪುರಸ್ಕೃತ ವಿಜ್ಞಾನಿಗಳಾದ ಡಂಕನ್ ಎಂ ಹಾಲಂಡೆ, ಥಾಮಸ್‌ ಕ್ರಿಶ್ಚಿಯನ್ ಸುದಾಫ್, ಅವ್ರಾಮ್‌ ಹ್ರೆಸ್ಕೊ, ಕುಲಪತಿ ಅಶೋಕ್‌ ಮಿತ್ತಲ್ ಇದ್ದರು.
ಭವಿಷ್ಯದ ಜನಾಂಗಕ್ಕೆ ಇಂದಿನ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳನ್ನು ಪರಿಚಯಿಸುವ ಉದ್ದೇಶದಿಂದ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ ಕ್ಯಾಂಪಸ್‌ನಲ್ಲಿ ಕ್ಯಾಪ್ಸೂಲ್ ಹುಗಿದಿಡಲಾಯಿತು. ಈ ಸಂದರ್ಭದಲ್ಲಿ ನೊಬೆಲ್ ಪುರಸ್ಕೃತ ವಿಜ್ಞಾನಿಗಳಾದ ಡಂಕನ್ ಎಂ ಹಾಲಂಡೆ, ಥಾಮಸ್‌ ಕ್ರಿಶ್ಚಿಯನ್ ಸುದಾಫ್, ಅವ್ರಾಮ್‌ ಹ್ರೆಸ್ಕೊ, ಕುಲಪತಿ ಅಶೋಕ್‌ ಮಿತ್ತಲ್ ಇದ್ದರು.   

ಜಲಂಧರ್‌: ಭಾರತ ಸೇರಿ ವಿವಿಧ ದೇಶಗಳಲ್ಲಿ ಹಬ್ಬುತ್ತಿರುವ ಅನೇಕ ಬಗೆಯ ಮಾರಕ ಸೋಂಕು ರೋಗಗಳಿಗೆ ಕಾರಣವಾಗಿರುವ ‘ಫಂಗೈ’ಗಳಿಗೆ ಆಸ್ಪತ್ರೆಗಳು ಮತ್ತು ಅಲ್ಲಿರುವ ತೀವ್ರ ನಿಗಾ ಘಟಕಗಳೇ ಪ್ರಮುಖ ಆಶ್ರಯ ತಾಣಗಳಾಗಿವೆ.

ಫಂಗೈನಿಂದ ಜಗತ್ತಿನಲ್ಲಿ ಪ್ರತಿ ವರ್ಷ 98 ಕೋಟಿ ಜನ ಅಂದರೆ ಸರಿ ಸುಮಾರು ಶೇ 14 ಕ್ಕೂ ಹೆಚ್ಚು ಜನಸಂಖ್ಯೆ ಸೋಂಕಿಗೊಳಗಾಗುತ್ತಿದ್ದಾರೆ ಎಂದು ‘ಇಂಟರ್‌ ನ್ಯಾಷನಲ್‌ ಸೊಸೈಟಿ ಫಾರ್‌ ಹ್ಯುಮನ್‌ ಅಂಡ್ ಅನಿಮಲ್ ಮೈಕಾಲಜಿ’ಯ ಅಧ್ಯಕ್ಷ ಪ್ರೊ.ಅರುಣಲೋಕೆ ಚಕ್ರವರ್ತಿ ತಿಳಿಸಿದರು.

ಇಲ್ಲಿನ ‘ಲವ್ಲಿ ಪ್ರೊಫೆಷನಲ್‌ ಯೂನಿವರ್ಸಿಟಿ’ ಆವರಣದಲ್ಲಿ ನಡೆಯುತ್ತಿರುವ 106 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ವಿಚಾರಗೋಷ್ಠಿಯಲ್ಲಿ ಅವರು ಹೊಸ ಬಗೆಯ ಸೋಂಕು ರೋಗಗಳಿಂದ ಉದ್ಭವಿಸುತ್ತಿರುವ ಸವಾಲುಗಳ ಕುರಿತು ಮಾತನಾಡಿದರು.

ADVERTISEMENT

ಆಸ್ಪತ್ರೆಗಳು ಮತ್ತು ತೀವ್ರ ನಿಗಾ ಘಟಕಗಳಲ್ಲಿ ಎಷ್ಟು ಸ್ವಚ್ಛ ಮಾಡಿದ್ದೇವೆ ಎಂದು ಹೇಳಿಕೊಂಡರೂ ಫಂಗೈಗಳನ್ನು ನಾಶ ಮುಕ್ತಗೊಳಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಅಲ್ಲದೆ, ಆಸ್ಪತ್ರೆಗಳು ಈ ಬಗ್ಗೆ ಹೆಚ್ಚಿಗೆ ಗಮನಹರಿಸುತ್ತಿಲ್ಲ. ಇದಕ್ಕಾಗಿ ಹೆಚ್ಚು ಖರ್ಚು ಮಾಡಲು ಆಸ್ಪತ್ರೆಗಳು ತಯಾರಿಲ್ಲ. ಹೀಗಾಗಿ ಐಸಿಯುಗಳಲ್ಲಿ ಇದ್ದು ಹೊರಗೆ ಹೋದ ರೋಗಿ ಕೆಲವೇ ದಿನಗಳಲ್ಲಿ ಫಂಗೈ ಪರಿಣಾಮ ಕಾಣಿಸಿಕೊಂಡು, ಪುನಃ ಅನಾರೋಗ್ಯಕ್ಕೆ ಒಳಗಾಗುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ವಿವರಿಸಿದರು.

ದೇಶದ ಪ್ರಮುಖ ಆಸ್ಪತ್ರೆಗಳಲ್ಲಿರುವ ತೀವ್ರ ನಿಗಾ ಘಟಕಗಳನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಅಲ್ಲಿ ಫಂಗೈಗಳಿರುವುದು ಕಂಡು ಬಂದಿತು. ಅಷ್ಟೇ ಅಲ್ಲ, ಶೇ 20 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಫಂಗೈ ಸೋಂಕು ರೋಗಗಳು ಐಸಿಯುಗಳಿಂದ ಹಬ್ಬಿರುವುದು ಬೆಳಕಿಗೆ ಬಂದಿತು ಎಂದರು.

ಫಂಗೈನಲ್ಲಿ ಹಲವು ಗಂಭೀರ ಸ್ವರೂಪದ, ಇನ್ನು ಕೆಲವು ಅಲ್ಪ ಪ್ರಮಾಣದ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಇದರ ಸಂಪೂರ್ಣ ನಿವಾರಣೆಗೆ ಸಂಘಟಿತ ಪ್ರಯತ್ನದ ಅಗತ್ಯವಿದೆ. ರೋಗ ಪತ್ತೆಯ ಜತೆಗೆ ಪ್ರಯೋಗಾಲಯದಲ್ಲಿ ಫಂಗಸ್‌ನ ಪತ್ತೆ ಮಾಡಬೇಕು. ಇವುಗಳ ನಿರ್ವಹಣೆಯ ಬಗ್ಗೆಯೂ ಗಮನಹರಿಸಬೇಕು. ಸಾಮಾನ್ಯ ಜ್ವರ ಬಂದಾಗಲೂ ಫಂಗಲ್‌ ಸೋಂಕು ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಚಕ್ರವರ್ತಿ ಹೇಳಿದರು.

ಔಷಧ ನಿರೋಧಕ ಶಕ್ತಿಯುಳ್ಳ ಫಂಗೈಗಳು ಹೆಚ್ಚು ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿವೆ. ಬೆಕ್ಕು, ನಾಯಿಯಂತಹ ಸಾಕು ಪ್ರಾಣಿಗಳಿಂದ ಮಾನವರಿಗೆ ಫಂಗೈಗಳು ವರ್ಗಾವಣೆ ಆಗುತ್ತಿವೆ. ಬ್ರೆಜಿಲ್‌ ದೇಶದಲ್ಲಿ ಬೆಕ್ಕಿಗೆ ಹೊಸ ಬಗೆಯ ಫಂಗೈ ಸೋಂಕಿನಿಂದ ಬೆಕ್ಕುಗಳು ವಿಚಿತ್ರವಾಗಿ ವರ್ತಿಸಲಾರಂಭಿಸಿದವು. ಅದರಿಂದ ಸೋಂಕಿತಗೊಂಡ ವ್ಯಕ್ತಿಯೂ ಅದೇ ರೀತಿ ವರ್ತಿಸಲಾರಂಭಿಸಿದ ಎಂದು ಅವರು ವಿವರಿಸಿದರು.

ಏನಿದು ಫೈಂಗೈ ಸೋಂಕು:ಫಂಗೈಗಳಿಂದ ಹರಡುವ ರೋಗಕ್ಕೆ ಬೂಸು ರೋಗ ಎನ್ನಲಾಗುತ್ತದೆ. ಚರ್ಮದಲ್ಲಿ ರಿಂಗ್ ವರ್ಮ್‌(ಹುಳುಕಜ್ಜಿ/ಹುಳುಕಡ್ಡಿ)ಗೂ ಬೂಸುರೋಗ ಎನ್ನಲಾಗುತ್ತದೆ. ಕೆಲವು ಕ್ಯಾಂಡಿಡಾ ಕುಲದ ಬೂಸು ಬಾಯಿಯಲ್ಲಿ ಸೋಂಕುಂಟು ಮಾಡುತ್ತವೆ. ದವಡೆಬಾವು ಕೂಡ ಬೂಸಿನಿಂದ ಆಗಬಹುದು. ಸಾಮಾನ್ಯವಾಗಿ ಮನುಷ್ಯರಲ್ಲಿ ರೋಗ ನಿರೋಧಕ ಗಟ್ಟಿಯಾಗಿದ್ದರೆ, ಬೂಸು(ಫಂಗೈ) ರೋಗವಾಗಿ ಕಾಡುವುದು ಕಡಿಮೆ. ಹೀಗಾಗಿಯೇ ಏಡ್ಸ್‌ ಬಂದವರಲ್ಲಿ ಇಂತಹ ಸೋಂಕುಗಳು ಹೆಚ್ಚು.

100 ಗ್ಯಾಜೆಟ್‌ಗಳನ್ನು ಭೂಮಿಯಲ್ಲಿ ಹುಗಿದ ವಿಜ್ಞಾನಿಗಳು

ಆಧುನಿಕ ಮೊಬೈಲ್‌ನಿಂದ ಮೊದಲ್ಗೊಂಡು ಮಂಗಳಯಾನದ ಬಾಹ್ಯಾಕಾಶ ನೌಕೆ, ತೇಜಸ್ ಯುದ್ದ ವಿಮಾನದ ಮಾದರಿ, ಬ್ರಹ್ಮೋಸ್‌ ಕ್ಷಿಪಣಿ ಮಾದರಿಗಳು ಸೇರಿ ಒಟ್ಟು 100 ಬಗೆಯ ಗ್ಯಾಜೆಟ್‌ಗಳನ್ನು ಕ್ಯಾಪ್ಸೂಲ್‌ನಲ್ಲಿಟ್ಟು ಹುಗಿದಿಡಲಾಯಿತು.

ಇದಕ್ಕೆ ‘ಟೈಮ್‌ ಕ್ಯಾಪ್ಸೂಲ್‌’ ಎಂದು ಹೆಸರಿಸಲಾಗಿದ್ದು, ಭಾರತೀಯ ಸೈನ್ಸ್‌ ಕಾಂಗ್ರೆಸ್‌ನಲ್ಲಿ ಭಾಗವಹಿಸಲು ಬಂದಿರುವ ನೊಬೆಲ್ ಪುರಸ್ಕೃತರಾದ ಇಸ್ರೇಲ್‌ನ ಬಯೋ ಕೆಮಿಸ್ಟ್‌ ಅವ್ರಾಮ್ ಹ್ರೆಸ್ಕೊ, ಅಮೆರಿಕದ ಭೌತಶಾಸ್ತ್ರಜ್ಞ ಡಂಕನ್ ಹಾಲಂಡೆ ಮತ್ತು ಜರ್ಮನಿಯ ಬಯೋ ಕೆಮಸ್ಟ್‌ ಥಾಮಸ್ ಕ್ರಿಶ್ಚಿಯನ್ ಸುದೋಫ್‌ ಈ ಕ್ಯಾಪ್ಸೂಲ್‌ ಅನ್ನು ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ ಕ್ಯಾಂಪಸ್‌ ಆವರಣದ ನೆಲದಲ್ಲಿ 10 ಅಡಿ ಆಳದಲ್ಲಿ ಹುಗಿಯಲಾಯಿತು. ಇದು ಮುಂದಿನ ನೂರು ವರ್ಷಗಳವರೆಗೆ ಭೂಮಿಯಲ್ಲೇ ಇರುತ್ತದೆ.

100 ವರ್ಷಗಳ ನಂತರದ ತಲೆಮಾರಿಗೆ ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನದ ಆವಿಷ್ಕಾರಗಳು ಮತ್ತು ಗ್ಯಾಜೆಟ್‌ಗಳು ಏನಿದ್ದವು ಎಂಬುದನ್ನು ತಿಳಿಸುವ ಉದ್ದೇಶದಿಂದ ಕ್ಯಾಪ್ಸೂಲ್‌ ಮಾಡಿ ಭೂಮಿಯಲ್ಲಿ ಭದ್ರವಾಗಿ ಇಟ್ಟಿದ್ದೇವೆ ಎಂದು ಎಲ್‌ಯುಪಿ ವಿಶ್ವವಿದ್ಯಾಲಯದ ಕುಲಪತಿ ಅಶೋಕ್‌ ಮಿತ್ತಲ್ ತಿಳಿಸಿದರು.

ಯಾವ ವಸ್ತುಗಳಿವೆ: ಲ್ಯಾಪ್‌ಟಾಪ್‌, ಸ್ಮಾರ್ಟ್‌ಫೋನ್, ಡ್ರೋನ್‌, ವಿಆರ್‌ ಗ್ಲಾಸಸ್‌, ಅಮೆಜಾನ್ ಅಲೆಕ್ಸಾ, ಏರ್‌ ಫಿಲ್ಟರ್‌, ಇಂಡಕ್ಷನ್‌ ಕುಕ್ಕರ್, ಸೋಲಾರ್‌ ಪ್ಯಾನಲ್, ಹಾರ್ಡ್‌ ಡಿಸ್ಕ್‌ ಮುಂತಾದವನ್ನು ಒಳಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.