ADVERTISEMENT

ಗಡ್ಕರಿ, ಅಮಿತ್ ಶಾ, ಪೀಯೂಷ್ ಗೋಯಲ್ ಉತ್ತರ ಪ್ರದೇಶದಲ್ಲಿ ಕೋವಿಡ್ ಲಸಿಕೆ ಪಡೆದರೇ?

ಐಎಎನ್ಎಸ್
Published 19 ಡಿಸೆಂಬರ್ 2021, 9:44 IST
Last Updated 19 ಡಿಸೆಂಬರ್ 2021, 9:44 IST
ಸಾಂದರ್ಭಿಕ ಚಿತ್ರ – ಪಿಟಿಐ
ಸಾಂದರ್ಭಿಕ ಚಿತ್ರ – ಪಿಟಿಐ   

ಲಖನೌ: ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಗ್ರಾಮವೊಂದರಲ್ಲಿ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಅಮಿತ್ ಶಾ, ಪೀಯೂಷ್ ಗೋಯಲ್ ಹೆಸರುಗಳನ್ನೇ ಹೋಲುವ ಕೋವಿಡ್ ಲಸಿಕೆ ಪ್ರಮಾಣಪತ್ರಗಳು ವಿತರಣೆಯಾಗಿವೆ. ವಯಸ್ಸಿನ ಉಲ್ಲೇಖದಲ್ಲಿಯೂ ವ್ಯತ್ಯಾಸವಿದೆ!

30 ವರ್ಷದ ಗಡ್ಕರಿ, 33 ವರ್ಷದ ಅಮಿತ್ ಶಾ, 26 ವರ್ಷದ ಓಂ ಬಿರ್ಲಾ ಹಾಗೂ 37 ವರ್ಷದ ಪೀಯೂಷ್ ಗೋಯಲ್ ಹೆಸರಿನಲ್ಲಿ ಲಸಿಕೆ ಪ್ರಮಾಣಪತ್ರ ನೀಡಲಾಗಿದೆ.

ಇಟಾವಾ ಜಿಲ್ಲೆಯ ಸರ್‌ಸಯೀನಾವರ್‌ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಮಾಣಪತ್ರಗಳನ್ನು ನೀಡಲಾಗಿದೆ.

ADVERTISEMENT

ನಮ್ಮ ಅಧಿಕಾರಿಯ ಐಡಿಗೆ ಯಾರೋ ಕನ್ನ ಹಾಕಿದ್ದು ಲಸಿಕಾ ಅಭಿಯಾನಕ್ಕೆ ಅಡ್ಡಿಪಡಿಸಲು ಹೀಗೆ ಮಾಡಿದ್ದಾರೆ. ಲಸಿಕಾ ಪ್ರಮಾಣಪತ್ರಗಳು ಆನ್‌ಲೈನ್‌ನಲ್ಲಿ ವಿತರಣೆಯಾಗಿದ್ದು, ಇದೊಂದು ಸಂಚು ಎಂದು ಇಟಾವಾ ಜಿಲ್ಲೆಯ ಮುಖ್ಯ ವೈದ್ಯಕೀಯ ಅಧಿಕಾರಿ ಭಗವಾನ್ ದಾಸ್ ತಿಳಿಸಿದ್ದಾರೆ.

ನಕಲಿ ಪ್ರಮಾಣಪತ್ರ ವಿತರಣೆ ಬಗ್ಗೆ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದ್ದು, ಮೂವರು ಸದಸ್ಯರ ಸಮಿತಿ ರಚಿಸಿದೆ. ಡಿಸೆಂಬರ್ 12ರಂದು ಮೊದಲ ಡೋಸ್ ಲಸಿಕೆ ಪಡೆದವರಿಗೆ ಈ ಪ್ರಮಾಣಪತ್ರಗಳನ್ನು ವಿತರಿಸಲಾಗಿತ್ತು ಎನ್ನಲಾಗಿದೆ.

ಇದೇ ರೀತಿಯ ಪ್ರಕರಣ ಈ ಹಿಂದೆಯೂ ಕೆಲವು ಬಾರಿ ವರದಿಯಾಗಿತ್ತು. ಬಿಹಾರದ ಅರವಲ್ ಜಿಲ್ಲೆಯ ಗ್ರಾಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಟ ಅಕ್ಷಯ್ ಕುಮಾರ್ ಸೇರಿದಂತೆ ಹಲವು ಗಣ್ಯರ ಹೆಸರಿನಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಿದ ಮತ್ತು ಕೋವಿಡ್ ಲಸಿಕೆ ನೀಡಿದ ಬಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಭ್ಯವಾದ ಪಟ್ಟಿಯಿಂದ ಇತ್ತೀಚೆಗೆ ತಿಳಿದುಬಂದಿತ್ತು.

ಕೋವಿಡ್ ಲಸಿಕೆ ಪ್ರಮಾಣಪತ್ರಗಳನ್ನು ಕೆಲವೊಮ್ಮೆ ತಪ್ಪಾಗಿ ವಿತರಿಸಿರುವ ಪ್ರಕರಣಗಳು ವರದಿಯಾಗಿರುವುದು ನಿಜ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇತ್ತೀಚೆಗೆ ಲೋಕಸಭೆಗೆ ತಿಳಿಸಿತ್ತು. ಡಾಟಾ ಎಂಟ್ರಿ ಲೋಪಗಳಿಂದಾಗಿ ಕೆಲವೊಮ್ಮೆ ಹೀಗಾಗುತ್ತಿದೆ ಎಂದು ಸಚಿವಾಲಯ ಕಾರಣ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.