ವಿ.ನಾರಾಯಣನ್
ಕೊಯಮತ್ತೂರು: ಮಾನವಸಹಿತ ಗಗನಯಾನಕ್ಕೆ ಪೂರ್ವಬಾವಿಯಾಗಿ ಕೈಗೊಳ್ಳಲಾಗುವ ಮಾನವರಹಿತ ಕಾರ್ಯಾಚರಣೆಗೆ ವಿನ್ಯಾಸಗೊಳಿಸಲಾಗಿರುವ ‘ವ್ಯೋಮಮಿತ್ರ’ವು, ಮನುಷ್ಯನ ಪ್ರತಿಕೃತಿಯಂತಿರುವ ರೊಬೊಟ್ ಆಗಿದ್ದು, ಇದು ಕೃತಕ ಬುದ್ಧಿಮತ್ತೆ (ಎಐ) ಆಧರಿಸಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ ಎಂದು ಇಸ್ರೊ ಅಧ್ಯಕ್ಷ ವಿ.ನಾರಾಯಣನ್ ಗುರುವಾರ ಇಲ್ಲಿ ಹೇಳಿದ್ದಾರೆ.
‘ವ್ಯೋಮಮಿತ್ರ’ ಹೊತ್ತ ಬಾಹ್ಯಾಕಾಶ ಕೋಶವನ್ನು ಡಿಸೆಂಬರ್ ಅಂತ್ಯಕ್ಕೆ ಉಡ್ಡಯನ ಮಾಡಲಾಗುವುದು. ಈ ಕುರಿತ ಕಾರ್ಯಗಳು ಭರದಿಂದ ಸಾಗಿವೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.
‘ಮಾನವಸಹಿತ ಗಗನಯಾನ ಕಾರ್ಯಕ್ರಮದ ಭಾಗವಾಗಿ ಗಗನಯಾನಿಗಳನ್ನು ಹೊತ್ತ ಕೋಶವನ್ನು ಭೂಮಿಯಿಂದ 400 ಕಿ.ಮೀ ದೂರದ ಕಕ್ಷೆಗೆ ಕಳುಹಿಸಲಾಗುವುದು. ಈ ವೇಳೆ, ತಾಪಮಾನ, ವಾಯುಭಾರ, ತೇವಾಂಶ ಹಾಗೂ ಇಂಗಾಲದ ಡೈಆಕ್ಸೈಡ್ ಪ್ರಮಾಣದಂತಹ ಅಂಶಗಳ ಕುರಿತು ಅಧ್ಯಯನ ನಡೆಸಲಾಗುವುದು’ ಎಂದು ಹೇಳಿದರು.
‘ಈ ಮಹತ್ವಾಕಾಂಕ್ಷೆ ಯೋಜನೆಗೆ ಭಾರತೀಯ ವಾಯುಪಡೆ, ನೌಕಾಪಡೆ, ಡಿಆರ್‌ಡಿಒ ಹಾಗೂ ಇತರ ಹಲವು ಸಂಸ್ಥೆಗಳು ಇಸ್ರೊ ಜೊತೆ ಕೈಜೋಡಿಸಿವೆ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.