ADVERTISEMENT

ಜಗತ್ತಿನ ಅತಿ ಉದ್ದದ ನದಿ ವಿಹಾರಕ್ಕೆ 13ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ

ಸುಮೀರ್‌ ಕರ್ಮಾಕರ್‌
Published 8 ಜನವರಿ 2023, 19:30 IST
Last Updated 8 ಜನವರಿ 2023, 19:30 IST
ಗಂಗಾ ವಿಲಾಸ್‌
ಗಂಗಾ ವಿಲಾಸ್‌   

ಗುವಾಹಟಿ: ಜಗತ್ತಿನ ಅತ್ಯಂತ ಉದ್ದದ ನದಿ ವಿಹಾರದ ದೋಣಿ ಎಂವಿ ಗಂಗಾ ವಿಲಾಸ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಇದೇ 13ರಂದು ಚಾಲನೆ ನೀಡಲಿದ್ದಾರೆ. ಭಾರತದ ನದಿ ಪ್ರವಾಸೋದ್ಯಮದ ಸಾಧ್ಯತೆಗಳನ್ನು ಇದು ತೆರೆದಿರಿಸಲಿದೆ.

ಉತ್ತರ ಪ್ರದೇಶದ ವಾರಾಣಸಿಯಿಂದ ಆರಂಭಗೊಳ್ಳುವ ಯಾತ್ರೆಯು 51 ದಿನಗಳ ಬಳಿಕ ಪೂರ್ವ ಅಸ್ಸಾಂನ ದಿಬ್ರೂಗಢಕ್ಕೆ ತಲುಪಲಿದೆ. ಹಾದಿಯ ಉದ್ದಕ್ಕೂ 50 ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅವಕಾಶ ಇದೆ. ಪಾರಂಪರಿಕ ತಾಣಗಳು, ರಾಷ್ಟ್ರೀಯ ಉದ್ಯಾನಗಳು, ಘಾಟ್‌ಗಳು ಇವುಗಳಲ್ಲಿ ಸೇರಿವೆ. ಬಿಹಾರದ ಪಟ್ನಾ, ಜಾರ್ಖಂಡ್‌ನ ಶಿವಗಂಜ್‌, ಪಶ್ಚಿಮ ಬಂಗಾಳದ ಕೋಲ್ಕತ್ತ, ಬಾಂಗ್ಲಾ ದೇಶದ ಢಾಕಾ, ಅಸ್ಸಾಂನ ಗುವಾಹಟಿಯಂತಹ ನಗರಗಳೂ ಈ ವಿಹಾರದ ಹಾದಿಯಲ್ಲಿ ಇವೆ. ಭಾರತ–ಬಾಂಗ್ಲಾದೇಶ ನದಿ ಮಾರ್ಗದಲ್ಲಿ ಈ ನೌಕೆಯು ಸಾಗಲಿದೆ.

ಎಂವಿ ಗಂಗಾದ ಮೊದಲ ಯಾತ್ರೆಯಲ್ಲಿ ಸ್ವಿಟ್ಜರ್‌ಲ್ಯಾಂಡ್‌ನ 23 ಪ್ರವಾಸಿಗರು ಭಾಗಿಯಾಗಲಿದ್ದಾರೆ. ವಿಶ್ವ ಪ್ರಸಿದ್ಧ ಅಸ್ಸಾಂ ಚಹಾದ ಕೇಂದ್ರವಾಗಿರುವ ದಿಬ್ರೂಗಢದಲ್ಲಿ ಯಾತ್ರೆಯು ಮೇ 1ರಂದು ಪೂರ್ಣಗೊಳ್ಳಲಿದೆ.

ADVERTISEMENT

ವಾರಾಣಸಿಯಲ್ಲಿ ಗಂಗಾ ಆರತಿಯಾದ ಬಳಿಕ ನೌಕೆಯು, ಬಿಹಾರದಲ್ಲಿರುವ ಬೌದ್ಧ ಯಾತ್ರಾ ಸ್ಥಳ ಸಾರಾನಾಥಕ್ಕೆ ಹೋಗಲಿದೆ. ಪಶ್ಚಿಮ ಬಂಗಾಳದ ಸುಂದರಬನ್‌, ಅಸ್ಸಾಂನ ಮಯೊಂಗ್‌ ಮತ್ತು ಮಜೌಲಿಗೂ ನೌಕೆಯು ಹೋಗಲಿದೆ. ಮಜೌಲಿ ಎಂಬುದು ನದಿಯಲ್ಲಿರುವ ಅತ್ಯಂತ ದೊಡ್ಡ ದ್ವೀಪ ಮತ್ತು ವೈಷ್ಣವ ಸಾಂಸ್ಕೃತಿಕ ಕೇಂದ್ರ. ಅಸ್ಸಾಂನಲ್ಲಿರುವ ಖಡ್ಗಮೃಗ ಆವಾಸಸ್ಥಾನ ಕಾಜಿರಂಗಾ ರಾಷ್ಟ್ರೀಯ ಉದ್ಯಾನ, ಹುಲಿಗಳ ಆವಾಸಸ್ಥಾನವಾಗಿರುವ ಸುಂದರಬನ್‌ನಲ್ಲಿಯೂ ನೌಕೆಗೆ ನಿಲುಗಡೆ ಇದೆ.

ಗಂಗಾ ವಿಲಾಸಕ್ಕೆ ಚಾಲನೆ ದೊರೆಯುವುದರೊಂದಿಗೆ ಇನ್ನಷ್ಟು ಉದ್ಯಮಿಗಳು ನೌಕಾಯಾನ ಆರಂಭಿಸಲು ಉತ್ತೇಜನ ದೊರೆಯಬಹುದು. ಇದರೊಂದಿಗೆ ಉದ್ಯೋಗ ಸೃಷ್ಟಿಯೂ ಆಗಲಿದೆ ಎಂದು ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವ ಸರ್ವಾನಂದ ಸೋನೊವಾಲ್‌ ಹೇಳಿದ್ದಾರೆ. ಜಗತ್ತಿನ ನದಿ ಸಾರಿಗೆಯ ಶೇ 60ರಷ್ಟು ಯುರೋಪ್‌ನಲ್ಲಿಯೇ ಇದೆ. ನದಿ ಸಾರಿಗೆಯು ಆ ದೇಶಗಳ ಪ್ರಗತಿಗೆ ನೆರವಾಗಿದೆ ಎಂದು ಅವರು ತಿಳಿಸಿದ್ದಾರೆ.

ಭಾರತದಲ್ಲಿ ಒಟ್ಟು ಎಂಟು ನದಿ ಸಾರಿಗೆ ಮಾರ್ಗಗಳು ಇವೆ. ಕೋಲ್ಕತ್ತ–ವಾರಾಣಸಿ ನಡುವೆ ನದಿ ಮಾರ್ಗ ಇದೆ. ಬ್ರಹ್ಮಪುತ್ರ ನದಿಯಲ್ಲಿಯೂ ನದಿ ಸಾರಿಗೆ ಇದೆ.

**

ಗಂಗಾ ವಿಲಾಸದಲ್ಲಿ ಏನಿದೆ?

62 ಮೀಟರ್‌: ನೌಕೆಯ ಉದ್ದ

12 ಮೀಟರ್‌: ನೌಕೆಯ ಅಗಲ

3: ನೌಕೆಯಲ್ಲಿರುವ ಅಂತಸ್ತುಗಳು

18: ಕೊಠಡಿಗಳು

36: ಪ್ರವಾಸಿಗರಿಗೆ ಅವಕಾಶ

**

ನಮ್ಮ ಶ್ರೀಮಂತ ಪರಂಪರೆಯು ಜಾಗತಿಕ ಮಟ್ಟದಲ್ಲಿ ಬೆಳಗಲಿದೆ. ಭಾರತದ ಜೀವವೈವಿಧ್ಯ, ಆಧ್ಯಾತ್ಮಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ತಿಳಿಯುವ ಅವಕಾಶವನ್ನು ಯಾತ್ರೆಯು ಕೊಡಲಿದೆ.
–ಸರ್ವಾನಂದ ಸೋನೊವಾಲ್‌, ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.