ಗಾಜಾ ಪಟ್ಟಿಯ ದಕ್ಷಿಣ ಭಾಗದ ಮಾವಸಿ ಪ್ರದೇಶದತ್ತ ಅಳಿದುಳಿದ ವಸ್ತುಗಳನ್ನು ತೆಗೆದುಕೊಂಡು ಪ್ಯಾಲೆಸ್ಟೀನ್ನಿಯನ್ನರು ಮಂಗಳವಾರ ತೆರಳಿದರು
–ಎಎಫ್‌ಪಿ ಚಿತ್ರ
ವಿಶ್ವಸಂಸ್ಥೆ/ ಜಿನೆವಾ: ‘ಇಸ್ರೇಲ್ ದಾಳಿಯಿಂದ ಗಾಜಾ ಪಟ್ಟಿಯಲ್ಲಿ ಆಹಾರ ಪೂರೈಕೆಗೆ ತಡೆಯುಂಟಾಗಿ, ತೀವ್ರ ಕ್ಷಾಮ ತಲೆದೋರಿದೆ. ತಕ್ಷಣವೇ ನೆರವು ಪೂರೈಸಲು ಕ್ರಮ ಕೈಗೊಳ್ಳಬೇಕಿದ್ದು, ಇಲ್ಲದೇ ಹೋದರೆ, ದೊಡ್ಡ ಪ್ರಮಾಣದಲ್ಲಿ ಸಾವು ಸಂಭವಿಸಲಿದೆ’ ಎಂದು ಜಾಗತಿಕ ಹಸಿವು ನಿಗಾ ಸಂಸ್ಥೆ ಎಚ್ಚರಿಕೆ ನೀಡಿದೆ.
ಇದರ ಬೆನ್ನಲ್ಲೇ, ಇಸ್ರೇಲ್ ದಾಳಿಯಿಂದ ದೇಶದಲ್ಲಿ ಇದುವರೆಗೆ 60 ಸಾವಿರ ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ ಎಂದು ಗಾಜಾದ ಆರೋಗ್ಯ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
‘ಗಾಜಾದಲ್ಲಿ ಮಾನವ ನಿರ್ಮಿತ ಹಸಿವಿನ ಬಿಕ್ಕಟ್ಟನ್ನು ‘ಕ್ಷಾಮ’ ಎಂದು ವರ್ಗೀಕರಿಸಬಹುದು’ ಎಂದು ಸಮಗ್ರ ಆಹಾರ ಭದ್ರತಾ ವರ್ಗೀಕರಣ (ಐಪಿಸಿ) ಕಳವಳ ವ್ಯಕ್ತಪಡಿಸಿದೆ. ಇಸ್ರೇಲ್ ಮೇಲೆ ಹೆಚ್ಚಿನ ಒತ್ತಡ ಹೇರುವ ಮೂಲಕ ಸಂತ್ರಸ್ತರಿಗೆ ಆಹಾರ ತಲುಪಿಸಲು ಕ್ರಮ ಕೈಗೊಳ್ಳಬಹುದು ಎಂದು ಹೇಳಿದೆ.
‘ದೊಡ್ಡ ಪ್ರಮಾಣದಲ್ಲಿ ಹಸಿವು, ಅಪೌಷ್ಠಿಕತೆ ಹಾಗೂ ಹಸಿವಿನಿಂದ ಉಂಟಾಗುತ್ತಿರುವ ಸಾವು ಹಾಗೂ ಕಾಯಿಲೆಗಳು ಹೆಚ್ಚಳವಾಗುತ್ತಿರುವುದಕ್ಕೆ ಸಾಕಷ್ಟು ಪುರಾವೆಗಳಿವೆ’ ಎಂದು ತಿಳಿಸಿದೆ.
ಗಾಜಾದಲ್ಲಿ ‘ಕ್ಷಾಮ’ ಎಂದು ಘೋಷಿಸಲು ಅನುಕೂಲ ಮಾಡಿಕೊಡುವ ತ್ವರಿತ ಔಪಾಚಾರಿಕ ವಿಶ್ಲೇಷಣೆಯನ್ನು ಪ್ರತಿಪಾದಿಸಿದೆ. ಒಂದೊಮ್ಮೆ ಆ ರೀತಿ ಘೋಷಿಸಿದರೆ, ಗಾಜಾದಲ್ಲಿ ನೆಲಸಿರುವ 21 ಲಕ್ಷ ಮಂದಿಗೆ ಆಹಾರ ತಲುಪಿಸಲು ಎದುರಾಗಿರುವ ಸಮಸ್ಯೆ ನಿವಾರಣೆಯಾಗಲಿದೆಯೇ ಎಂಬುದನ್ನು ಖಚಿತಪಡಿಸಿಲ್ಲ.
ಶೇ 50 ಮಂದಿಗೆ ಆಹಾರ ಲಭ್ಯವಿಲ್ಲ: ‘ಗಾಜಾದಲ್ಲಿ ಸಂಕಷ್ಟದಲ್ಲಿರುವವರಿಗೆ ಯಾವುದೇ ಆಹಾರ ಸಿಗುತ್ತಿಲ್ಲ. ಮಾನವೀಯ ನೆಲೆಯಿಂದ ವಿತರಣೆಯಾಗುತ್ತಿರುವ ಆಹಾರವು ಭಾನುವಾರದಿಂದ ಶೇಕಡಾ 50ರಷ್ಟು ಮಂದಿಗೂ ತಲುಪುತ್ತಿಲ್ಲ’ ಎಂದು ವಿಶ್ವ ಆಹಾರ ಯೋಜನೆಯ ಮುಖ್ಯಸ್ಥ ರೊಸ್ ಸ್ಮಿತ್ ತಿಳಿಸಿದ್ದಾರೆ.
‘ಗಾಜಾ ಪಟ್ಟಿಯಲ್ಲಿ 4.70 ಲಕ್ಷ ಮಂದಿ ಕ್ಷಾಮ ಪರಿಸ್ಥಿತಿ ಎದುರಿಸುತ್ತಿದ್ದು, 90 ಸಾವಿರ ಮಹಿಳೆಯರು ಹಾಗೂ ಮಕ್ಕಳಿಗೆ ವಿಶೇಷ ಪೌಷ್ಠಿಕಾಂಶ ಒದಗಿಸಬೇಕಾದ ಅಗತ್ಯವಿದೆ. ಹಸಿವಿನಿಂದ 88 ಮಕ್ಕಳು ಸೇರಿದಂತೆ 147 ಮಂದಿ ಮೃತಪಟ್ಟಿದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.