ADVERTISEMENT

ಕೋವಿಡ್‌: ಭಾರತಕ್ಕೆ ಪ್ರಯಾಣ ನಿರ್ಬಂಧ ಹೇರಿದ ಜರ್ಮನಿ

ಏಜೆನ್ಸೀಸ್
Published 24 ಏಪ್ರಿಲ್ 2021, 12:05 IST
Last Updated 24 ಏಪ್ರಿಲ್ 2021, 12:05 IST
ಕೋವಿಡ್ ತಡೆ ಕ್ರಮವಾಗಿ ಜರ್ಮನಿಯಲ್ಲಿ ದೇಶವ್ಯಾಪಿ ರಾತ್ರಿ ಕರ್ಫ್ಯೂ ಹೇರಿದ್ದು, ಹ್ಯಾಂಬರ್ಗ್‌ ನಗರ ನಿರ್ಜನವಾಗಿತ್ತು
ಕೋವಿಡ್ ತಡೆ ಕ್ರಮವಾಗಿ ಜರ್ಮನಿಯಲ್ಲಿ ದೇಶವ್ಯಾಪಿ ರಾತ್ರಿ ಕರ್ಫ್ಯೂ ಹೇರಿದ್ದು, ಹ್ಯಾಂಬರ್ಗ್‌ ನಗರ ನಿರ್ಜನವಾಗಿತ್ತು   

ಬರ್ಲಿನ್‌: ಕೋವಿಡ್‌ ಪರಿಸ್ಥಿತಿ ಗಂಭೀರವಾಗಿರುವ ಭಾರತದಿಂದ ತನ್ನ ಪ್ರಜೆಗಳನ್ನು ಹೊರತುಪಡಿಸಿ, ಉಳಿದೆಲ್ಲ ಪ್ರಯಾಣಿಕರ ಪ್ರವೇಶಕ್ಕೆ ಜರ್ಮನಿ ನಿರ್ಬಂಧ ಹೇರಿದೆ. ಆರೋಗ್ಯ ಸಚಿವ ಜೆನ್ಸ್‌ ಸ್ಪಾನ್‌ ಅವರು, ‘ಭಾರತದಲ್ಲಿ ಕೊರೊನಾದ ಹೊಸ ರೂಪಾಂತರ ಸೋಂಕು ಪತ್ತೆಯಾಗಿದ್ದು, ಪಿಡುಗಿನ ಕೇಂದ್ರ ಸ್ಥಾನವಾಗಿದೆ’ ಎಂದಿದ್ದಾರೆ.

ಹೊಸ ರೂಪಾಂತರ ಸೋಂಕಿನ ಕುರಿತು ನಮಗೆ ತೀವ್ರ ಆತಂಕವಾಗಿದೆ. ಇದರಿಂದ ನಮ್ಮ ಲಸಿಕೆ ಅಭಿಯಾನಕ್ಕೆ ಧಕ್ಕೆ ಆಗಬಾರದು. ಹೀಗಾಗಿ, ಭಾರತದಿಂದ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಸೋಮವಾರದಿಂದ ಜಾರಿಗೆ ಬರುವಂತೆ ಭಾರತದಿಂದ ಕೇವಲ ಜರ್ಮನ್‌ ಪ್ರಜೆಗಳು ಮಾತ್ರವೇ ಬರಬಹುದಾಗಿದೆ. ಜರ್ಮನಿಗೆ ಬರುವ ಮೊದಲು ಕೋವಿಡ್‌ ಪರೀಕ್ಷೆ ಹಾಗೂ ಬಂದ ನಂತರ 14 ದಿನದ ಕ್ವಾರಂಟೈನ್‌ ಕಡ್ಡಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಅಪಾಯಕಾರಿಯಾದ ರೂಪಾಂತರಿ ಸೋಂಕು ಇರುವ ಸ್ಥಳ ಭಾರತ ಎಂದು ಜರ್ಮನಿ ವ್ಯಾಖ್ಯಾನಿಸಿದೆ. ಈಗಾಗಲೇ ವಿವಿಧ ದೇಶಗಳು ಭಾರತದ ಮೇಲೆ ಸಂಚಾರ ನಿರ್ಬಂಧ ಹೇರಿವೆ. ಕೆನಡಾ, ಬ್ರಿಟನ್, ಕುವೈತ್‌ ಬಳಿಕ ಈ ಪಟ್ಟಿಗೆ ಈಗ ಜರ್ಮನಿಯೂ ಸೇರಿದೆ.

ಕಠಿಣ ನಿರ್ಬಂಧಗಳು ಜಾರಿ: ಕೋವಿಡ್‌ ತಡೆಗೆ ದೇಶವ್ಯಾಪಿ ಕಠಿಣ ನಿರ್ಬಂಧ ಜಾರಿಗೊಳಿಸಲಾಗಿದೆ. ಕ್ರಮವಾಗಿ ರಾತ್ರಿ 10ರಿಂದ ಬೆಳಿಗ್ಗೆ 5ರವರೆಗೂ ಕರ್ಫ್ಯೂ ಇರುತ್ತದೆ. ಜನರು ಸಹಕರಿಸಬೇಕು ಎಂದು ಜರ್ಮನಿಯ ಚಾನ್ಸೆಲರ್‌ ಏಂಜೆಲಾ ಮರ್ಕೆಲ್‌ ನಾಗರಿಕರಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.