
ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಬುಧವಾರ ಒಂಬತ್ತನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತ ವಯಸ್ಸಿನ ಮೂವರು ಸಹೋದರಿಯರ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಬಾಲಕಿಯರು ಬರೆದಿಟ್ಟಿರುವ ಡೈರಿಯ ಸಮಗ್ರ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಬಾಲಕಿಯರ ಕೊಠಡಿಯಲ್ಲಿ ದೊರೆತ ಒಂಬತ್ತು ಪುಟಗಳ ಡೈರಿಯನ್ನು ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದರು.
‘ಕೊರಿಯನ್ ಸಂಸ್ಕೃತಿಯ ಆಳವಾದ ಪ್ರಭಾವಕ್ಕೆ ಒಳಗಾಗಿದ್ದ ಮಕ್ಕಳು, ಕೌಟುಂಬಿಕ ಕಲಹದಿಂದ ಅನುಭವಿಸಿದ ಯಾತನೆಯ ಬಗ್ಗೆ ಡೈರಿಯಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ಮಾಹಿತಿ ನೀಡಿದ್ದಾರೆ.
‘ಮೃತ ಮಕ್ಕಳಾದ ನಿಶಿಕಾ (16), ಪ್ರಾಚಿ (14), ಪಖಿ (12) ಮೂರು ವರ್ಷಗಳಿಂದ ಮೊಬೈಲ್‌ನಲ್ಲಿ ಕೊರಿಯನ್ ಆಟ ಆಡುತ್ತಿದ್ದರು ಮತ್ತು ಅಂದಿನಿಂದ ಅವರು ಶಾಲೆಗೆ ಹೋಗಿಲ್ಲ’ ಎಂದು ಮಕ್ಕಳ ತಂದೆ ಚೇತನ್ ಕುಮಾರ್ ಹೇಳಿಕೆ ನೀಡಿದ್ದಾರೆ.
‘ಬಾಲಕಿಯರು ಕೊರಿಯನ್ ಟಾಸ್ಕ್ ಆಧಾರಿತ ಅಪ್ಲಿಕೇಷನ್ ಬಳಸಿದ್ದ ಬಗ್ಗೆ ಆರಂಭಿಕ ತನಿಖೆಯಲ್ಲಿ ಯಾವುದೇ ಪುರಾವೆಗಳು ದೊರೆತಿಲ್ಲ. ಈ ಬಗ್ಗೆ ಇನ್ನಷ್ಟು ತನಿಖೆ ನಡೆಸುತ್ತಿದ್ದೇವೆ. ಒಂದು ವೇಳೆ ಅಂಥ ಅಪ್ಲಿಕೇಷನ್ ಬಳಸಲಾಗಿದೆ ಎನ್ನುವುದು ದೃಢಪಟ್ಟರೆ, ಅದನ್ನು ನಿಷೇಧಿಸುವಂತೆ ಸಂಬಂಧಿಸಿದ ಇಲಾಖೆಗೆ ಪತ್ರ ಬರೆಯಲಾಗುವುದು’ ಅವರು ಹೇಳಿದ್ದಾರೆ.
ಮಕ್ಕಳ ಅಂತ್ಯಕ್ರಿಯೆ:
ಸಹೋದರಿಯರ ಮರಣೋತ್ತರ ಪರೀಕ್ಷೆಯ ಬಳಿಕ, ಅವರ ಪಾರ್ಥಿವ ಶರೀರಗಳನ್ನು ಬುಧವಾರ ಸಂಜೆ ಯಮುನಾ ನದಿ ದಡದಲ್ಲಿರುವ ದಹಲಿಯ ನಿಗಮ್ ಬೋಧ್ ಘಾಟ್‌ನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಬಾಲಕಿಯರ ತಂದೆ ಚೇತನ್ ಅವರು ವಿಧಿ–ವಿಧಾನಗಳನ್ನು ಪೂರೈಸಿದರು ಎಂದು ಶಾಲಿಮಾರ್ ಗಾರ್ಡನ್‌ನ ಹೆಚ್ಚುವರಿ ಪೊಲೀಸ್ ಆಯುಕ್ತ ಅತುಲ್ ಕುಮಾರ್ ಸಿಂಗ್ ಮಾಹಿತಿ ನೀಡಿದರು.
‘ತಲೆಗೆ ತೀವ್ರ ಪೆಟ್ಟಾದ ಪರಿಣಾಮ ಸಹೋದರಿಯರು ಮೃತಪಟ್ಟಿದ್ದಾರೆ’ ಎಂದು ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿದೆ ಎಂದು ಅವರು ಹೇಳಿದರು.
ಸಹೋದರಿಯರ ಸಾವಿನ ಪ್ರಕರಣವು ಆನ್‌ಲೈನ್ ಗೇಮ್ ವ್ಯಸನ ಹಾಗೂ ಕೊರಿಯನ್ ಸಂಸ್ಕೃತಿಯ ಮೇಲಿನ ಅತಿಯಾದ ಮೋಹದ ಗಂಭೀರ ಪರಿಣಾಮಕ್ಕೆ ನಿದರ್ಶನವಾಗಿದೆ ಎಂದು ಮನಃಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆನ್‌ಲೈನ್ ಗೇಮಿಂಗ್ ಗೀಳು ವ್ಯಕ್ತಿಯನ್ನು ಸಾಮಾಜಿಕ ಸಂವಹನದಿಂದ ದೂರವಿಡುತ್ತದೆ. ಇದು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ– ವಂದನಾ ಪ್ರಕಾಶ್ ಮನಃಶಾಸ್ತ್ರಜ್ಞೆ
ಬಾಲಕಿಯರು ಬರೆದ ಡೈರಿಯಲ್ಲಿ ಏನಿದೆ?
ಕೊರಿಯಾ ಮೇಲೆ ಅಪಾರ ಪ್ರೀತಿ ಮತ್ತು ಬಾಂಧವ್ಯವನ್ನು ಮಕ್ಕಳು ಬೆಳೆಸಿಕೊಂಡಿದ್ದರು. ಅದನ್ನು ತಡೆಯಲು ಕುಟುಂಬದವರು ಮಾಡಿದ ಪ್ರಯತ್ನಗಳ ಬಗ್ಗೆ ಡೈರಿಯಲ್ಲಿ ಪದೇ ಪದೇ ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ‘ನಾವು ಕೊರಿಯನ್ ಅನ್ನು ಪ್ರೀತಿಸುತ್ತೇವೆ ಪ್ರೀತಿ ಪ್ರೀತಿ ಪ್ರೀತಿ...’ ಎಂದು ಪ್ರಸ್ತಾಪಿಸಿರುವ ಬಾಲಕಿಯರು ‘ಇದು ನಿಜವಾದ ಜೀವನ ಕಥೆ ಇದನ್ನು ನಂಬಿ’ ಎಂದು ಬರೆದಿಟ್ಟಿದ್ದಾರೆ. ‘ಕೊರಿಯನ್ ಅನ್ನು ತ್ಯಜಿಸುವಂತೆ ನೀವು ನಮ್ಮನ್ನು ಒತ್ತಾಯಿಸುತ್ತಿದ್ದೀರಿ. ಕೊರಿಯನ್ ನಮ್ಮ ಜೀವನ... ಭಾರತೀಯರ ಜತೆಗೆ ನಮ್ಮ ಮದುವೆ ಮಾಡಲು ನೀವು ಬಯಸಿದ್ದೀರಿ. ಆದರೆ ಅದು ಎಂದಿಗೂ ಸಂಭವಿಸುವುದಿಲ್ಲ’ ಎಂದು ಹೇಳಿದ್ದಾರೆ.
ಒದೆಗಳಿಗಿಂತ ಸಾವೇ ಲೇಸು: ‘ನಿಮ್ಮ ಒದೆಗಳನ್ನು ತಿನ್ನುವುದಕ್ಕಿಂತ ನಮಗೆ ಸಾಯುವುದೇ ಉತ್ತಮ. ಅದಕ್ಕಾಗಿಯೇ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ... ಕ್ಷಮಿಸಿ ಅಪ್ಪಾ’ ಎಂದು ಮಕ್ಕಳು ಡೈರಿಯಲ್ಲಿ ಉಲ್ಲೇಖಿಸಿದ್ದಾರೆ.
‘ಈ ಪಾಕೆಟ್ ಡೈರಿಯನ್ನು ವಶಕ್ಕೆ ಪಡೆಯಲಾಗಿದ್ದು ಸಮಗ್ರ ತನಿಖೆ ನಡೆಸುತ್ತಿದ್ದೇವೆ. ಡೈರಿ ಬರೆಯಲಾದ ಸಮಯ ಸಂದರ್ಭಗಳ ಬಗ್ಗೆ ಪರಿಶೀಲಿಸುತ್ತಿದ್ದೇವೆ’ ಎಂದು ಡಿಸಿಪಿ ನಿಮಿಷಾ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬ
ಬಾಲಕಿಯರ ತಂದೆ ಚೇತನ್ ಕುಮಾರ್ ಅವರು ಷೇರು ಮಾರುಕಟ್ಟೆಯಲ್ಲಿ ಭಾರಿ ನಷ್ಟ ಅನುಭವಿಸಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು.
ಅಂದಾಜು ₹2 ಕೋಟಿಯಷ್ಟು ಹಣವನ್ನು ಕಳೆದುಕೊಂಡಿದ್ದರು. ಇದರಿಂದಾಗಿ ಅವರ ಮನೆಯಲ್ಲಿ ಆಗಾಗ ಜಗಳ ನಡೆಯುತ್ತಿತ್ತು. ಒಂದು ಹಂತದಲ್ಲಿ ವಿದ್ಯುತ್ ಬಿಲ್ ಪಾವತಿಸಲು ಅವರ ಬಳಿ ಹಣ ಇರಲಿಲ್ಲ. ಅದಕ್ಕಾಗಿ ಅವರು ಮೊಬೈಲ್ ಫೋನ್‌ಗಳನ್ನು ಮಾರಾಟ ಮಾಡಿದ್ದರು ಎಂದು ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘದ ಪದಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ತನಿಖೆಯ ಭಾಗವಾಗಿ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನೂ ಪರಿಶೀಲಿಸಲಾಗುತ್ತಿದೆ ಎಂದು ಡಿಸಿಪಿ ನಿಮಿಷಾ ಪಾಟೀಲ್ ತಿಳಿಸಿದ್ದಾರೆ.
ಚೇತನ್‌ಗೆ ಇಬ್ಬರು ಪತ್ನಿಯರು
ಈ ಬಾಲಕಿಯರ ತಂದೆ ಚೇತನ್ ಕುಮಾರ್‌ಗೆ ಇಬ್ಬರು ಪತ್ನಿಯರು. ಮೊದಲ ಪತ್ನಿಯಿಂದ ಒಬ್ಬ ಮಗ ಮತ್ತು ಮಗಳು ಹಾಗೂ ಎರಡನೇ ಪತ್ನಿಯಿಂದ (ಮೊದಲ ಹೆಂಡತಿಯ ತಂಗಿ) ಮೂವರು ಹೆಣ್ಣುಮಕ್ಕಳನ್ನು ಹೊಂದಿದ್ದರು. ಮೊದಲ ವಿವಾಹವಾದ 17 ವರ್ಷಗಳ ಬಳಿಕ ಅವರು ಎರಡನೇ ಮದುವೆ ಮಾಡಿಕೊಂಡಿದ್ದರು.
‘ಕುಟುಂಬದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ವಿದ್ಯುತ್ ಬಿಲ್ ಪಾವತಿಸಲು ಹೆಣ್ಣುಮಕ್ಕಳ ಮೊಬೈಲ್ ಫೋನ್‌ಗಳನ್ನು ಮಾರಿದ್ದೆ. ಸಾಲದ ಹೊರೆಯ ಕಾರಣ ಕೋವಿಡ್ ಕಾಲಘಟ್ಟದ ಬಳಿಕ ಬಾಲಕಿಯರನ್ನು ಶಾಲೆಗೆ ಕಳುಹಿಸಿರಲಿಲ್ಲ’ ಎಂದು ಚೇತನ್ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಕೊರಿಯನ್ ನಾಟಕ ಕಾರ್ಯಕ್ರಮಗಳಿಂದ ತೀವ್ರ ಪ್ರಭಾವಿತರಾಗಿದ್ದ ಸಹೋದರಿಯರಿಗೆ ಕಳೆದ ವಾರದಿಂದ ಮೊಬೈಲ್ ಸಿಗದಂತಾಗಿತ್ತು. ಇದರಿಂದ ಅವರು ತೀವ್ರವಾಗಿ ನೊಂದಿರಬಹುದು’ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.