ADVERTISEMENT

'ಗೂಂಗಟ್' ಸಂಪ್ರದಾಯದ ವಿರುದ್ಧ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ದನಿ

ಪಿಟಿಐ
Published 5 ನವೆಂಬರ್ 2019, 12:41 IST
Last Updated 5 ನವೆಂಬರ್ 2019, 12:41 IST
ಅಶೋಕ್ ಗೆಹ್ಲೋಟ್
ಅಶೋಕ್ ಗೆಹ್ಲೋಟ್   

ನವದೆಹಲಿ:ಮಹಿಳಾ ಸಬಲೀಕರಣಕ್ಕಾಗಿ 'ಗೂಂಗಟ್' ಸಂಪ್ರದಾಯವನ್ನು ನಿಲ್ಲಿಸಬೇಕು ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಉತ್ತರ ಭಾರತದ ಹಲವೆಡೆ ಹಿಂದೂ ಮಹಿಳೆಯರು ಮುಖದ ಮೇಲೆ ಸೆರಗು ಹಾಕಿಕೊಳ್ಳುವ 'ಗೂಂಗಟ್' ಸಂಪ್ರದಾಯವಿದೆ. ಇದು ಪುರಾತನ ಸಂಪ್ರದಾಯ. ಈ ಸಂಪ್ರದಾಯವು ಮಹಿಳಾ ಸಬಲೀಕರಣಕ್ಕೆ ತಡೆಯೊಡ್ಡುತ್ತದೆ ಎಂದು ಜೈಪುರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗೆಹ್ಲೋಟ್ ಹೇಳಿದ್ದಾರೆ.

ಕಾಲ ಬದಲಾಗಿದೆ ಆದರೆ ಗೂಂಗಟ್ ಸಂಪ್ರದಾಯ ಇನ್ನೂ ಹಲವು ಗ್ರಾಮಗಳಲ್ಲಿ ಇದೆ. ಮಹಿಳೆಯರನ್ನು ಗೂಂಗಟ್‌ನಲ್ಲಿ ನಿರ್ಬಂಧಿಸಿಡುವುದೇತಕೆ?. ಗೂಂಗಟ್ ಇರುವವರೆಗೆ ಮಹಿಳೆಯರು ಅಭಿವೃದ್ದಿ ಹೊಂದುವುದಿಲ್ಲ ಎಂದು ಗೆಹ್ಲೋಟ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ADVERTISEMENT

ಸೆರಗಿನಿಂದ ಮುಖ ಮುಚ್ಚದೆ ಮಹಿಳೆಯರು ಮುಂದೆ ಬಂದರೆ ಮಾತ್ರ ದೇಶ ಕಟ್ಟುವ ಕಾರ್ಯದಲ್ಲಿ ಮಹಿಳೆಯರು ಭಾಗಿಯಾಗಲು ಸಾಧ್ಯ. ಮಹಿಳೆಯರು ಸಬಲರಾಗಿದ್ದಾರೆ. ಸಮಾಜದಲ್ಲಿ ಬದಲಾವಣೆ ತರಲು ಅವರಿಂದ ಸಾಧ್ಯ ಮತ್ತು ಅವರ ಪಾತ್ರ ಮಹತ್ವದ್ದಾಗಿರುತ್ತದೆ. ನೀವು (ಮಹಿಳೆಯರು) ಧೈರ್ಯದಿಂದ ಮುಂದೆ ಬರಬೇಕು. ರಾಜ್ಯ ಸರ್ಕಾರ ನಿಮ್ಮೊಂದಿಗಿದೆ ಎಂದು ಗೆಹ್ಲೋಟ್ ಹೇಳಿದ್ದಾರೆ.

ಗೆಹ್ಲೋಟ್ ಈ ಹಿಂದೆಯೂ ಗೂಂಗಟ್ ನಿಷೇಧಿಸುವ ಬಗ್ಗೆ ದನಿಯೆತ್ತಿದ್ದರು. 2016ರಲ್ಲಿ ಮಹಿಳಾ ಕಾಲೇಜೊಂದರಲ್ಲಿ ಮಾತನಾಡಿದ್ದ ಅವರು ಗೂಂಗಟ್‌ನಿಂದ ಮಹಿಳೆಯರನ್ನು ಸ್ವತಂತ್ರವಾಗಿರಿಸಿ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.