ADVERTISEMENT

ನಿತೀಶ್ ಕುಮಾರ್‌ಗೆ ಪಿಎಂ ಅಭ್ಯರ್ಥಿಯಾಗುವ ಅವಕಾಶ 2 ಸಲ ತಪ್ಪಿದೆ: ಕೇಂದ್ರ ಸಚಿವ ವ್ಯಂಗ್ಯ

ಐಎಎನ್ಎಸ್
Published 29 ಜೂನ್ 2023, 4:02 IST
Last Updated 29 ಜೂನ್ 2023, 4:02 IST
ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್‌
ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್‌   

ಪಟ್ನಾ: ನಗರದಲ್ಲಿ ಜೂನ್‌ 23ರಂದು ನಡೆದ ವಿರೋಧ ಪಕ್ಷಗಳ ಸಭೆ ಕುರಿತು ವ್ಯಂಗ್ಯವಾಡಿರುವ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌, ಜೆಡಿಯು ನಾಯಕ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರನ್ನು ಕಿಚಾಯಿಸಿದ್ದಾರೆ.

ಲೋಕಸಭೆಯಲ್ಲಿ ತಾವು ಪ್ರತಿನಿಧಿಸುವ ಬೇಗುಸರಾಯ್‌ ಕ್ಷೇತ್ರದಲ್ಲಿ ಮಾತನಾಡಿದ ಗಿರಿರಾಜ್‌ ಸಿಂಗ್‌, ವಿರೋಧ ಪಕ್ಷಗಳ ನಾಯಕನಾಗಬೇಕು ಎನ್ನುವ ಆಕಾಂಕ್ಷೆಯನ್ನು ನಿತೀಶ್‌ ಕುಮಾರ್‌ ಹೊಂದಿದ್ದರು. ಆದರೆ, ಅದಕ್ಕೆ ಅಡ್ಡಿಯಾದರು ಆರ್‌ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್‌ ಎಂದು ಹೇಳಿದ್ದಾರೆ.

'ಪ್ರಧಾನಿ ಅಭ್ಯರ್ಥಿ' ಎಂಬುದನ್ನು 'ದುಲ್ಹಾ' (ಮದುಮಗ) ಎಂದಿರುವ ಗಿರಿರಾಜ್‌, ಮದುಮಗನಾಗುವ ಅವಕಾಶ ನಿತೀಶ್‌ ಅವರಿಗೆ ಎರಡು ಸಲ ತಪ್ಪಿದೆ ಎಂದು ಕಿಚಾಯಿಸಿದ್ದಾರೆ.

ADVERTISEMENT

'ನಿತೀಶ್‌ ಕುಮಾರ್ ಅವರು ಮದುಮಗ (ಪ್ರಧಾನಿ ಅಭ್ಯರ್ಥಿ) ಆಗುವ ಅವಕಾಶವನ್ನು ಎರಡು ಬಾರಿ ಕಳೆದುಕೊಂಡಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ (ಕೆಸಿಆರ್‌) ಅವರು ಕಳೆದ ವರ್ಷ ಪಟ್ನಾಗೆ ಬಂದಿದ್ದಾಗ ಅವರು ತಮ್ಮ ಹೆಸರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುತ್ತಾರೆ ಎಂದು ನಿತೀಶ್‌ ಭಾವಿಸಿದ್ದರು. ಆದರೆ, ಕೆಸಿಆರ್‌ ಸಹ ನಿತೀಶ್‌ ಅವರಿಂದ ಅದೇ ನಿರೀಕ್ಷೆಯಲ್ಲಿದ್ದರು. ಹೀಗಾಗಿ ಮೊದಲನೇ ಬಾರಿ ನಿತೀಶ್‌ ಆಸೆ ಕೈಗೂಡಿರಲಿಲ್ಲ. ಜೂನ್‌ 23ರಂದು 15 ಪಕ್ಷಗಳು ಸೇರಿದ್ದ ಸಭೆ ವೇಳೆ ಎರಡನೇ ಬಾರಿ ನಿರಾಸೆಯಾಗಿದೆ. ನಿತೀಶ್‌ ಅವರು ವಿರೋಧ ಪಕ್ಷಗಳ ನಾಯಕರು ತಮ್ಮ ಹೆಸರನ್ನು ಘೋಷಿಸಬಹುದು ಎಂದುಕೊಂಡಿದ್ದರು. ಆದರೆ, ಲಾಲು ಪ್ರಸಾದ್‌ ಅತ್ಯಂತ ಜಾಣ್ಮೆಯಿಂದ 2024ರ ಲೋಕಸಭೆ ಚುನಾವಣೆಗೆ ಮದುಮಗನೆಂದು ರಾಹುಲ್‌ ಗಾಂಧಿ ಹೆಸರನ್ನು ಮುಂದೆ ತಂದರು' ಎಂದು ಗೇಲಿ ಮಾಡಿದ್ದಾರೆ.

ಮುಂದುವರಿದು, 'ಆದಾಗ್ಯೂ, 2024ರಲ್ಲಿ ಪ್ರಧಾನಿ ಹುದ್ದೆ ಖಾಲಿ ಇಲ್ಲ ಎಂದು ನಿತೀಶ್‌ ಕುಮಾರ್‌ ಹಾಗೂ ಇತರರಿಗೆ ಹೇಳಲು ಬಯಸುತ್ತೇನೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಯಾರೊಬ್ಬರೂ ಸವಾಲೊಡ್ಡಲಾರರು' ಎಂದು ಸಿಂಗ್‌ ಹೇಳಿದ್ದಾರೆ.

ಮೋದಿ ಸರ್ಕಾರ ಕೇಂದ್ರದಲ್ಲಿ 9 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೇಗುಸರಾಯ್‌ನಲ್ಲಿ ಸಮಾವೇಶ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.