ADVERTISEMENT

ಹೆಣ್ಣು ಮಗು ರಕ್ಷಣೆ | ವಿಶೇಷ ಕಾನೂನು ಅಗತ್ಯ: ಸಿಜೆಐ ಬಿ.ಆರ್‌.ಗವಾಯಿ

ಪಿಟಿಐ
Published 11 ಅಕ್ಟೋಬರ್ 2025, 16:04 IST
Last Updated 11 ಅಕ್ಟೋಬರ್ 2025, 16:04 IST
ಸಿಜೆಐ ಬಿ.ಆರ್‌.ಗವಾಯಿ
ಸಿಜೆಐ ಬಿ.ಆರ್‌.ಗವಾಯಿ   

ನವದೆಹಲಿ: ಈಗಿನ ಡಿಜಿಟಲ್‌ ದಿನಗಳಲ್ಲಿ ಬಾಲಕಿಯರು ಸುಲಭವಾಗಿ ದಾಳಿಗೆ ಒಳಗಾಗುವ ಅಪಾಯ ಎದುರಿಸುತ್ತಿದ್ದಾರೆ. ಇಂತಹ ದೌರ್ಜನ್ಯಗಳಿಂದ ಬಾಲಕಿಯರನ್ನು ರಕ್ಷಿಸುವ ಸಂಬಂಧ ವಿಶೇಷ ಕಾನೂನು ರೂಪಿಸಬೇಕು ಹಾಗೂ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ತರಬೇತಿಯ ಅಗತ್ಯವಿದೆ ಎಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್‌.ಗವಾಯಿ ಶನಿವಾರ ಹೇಳಿದರು.

‘ಆನ್‌ಲೈನ್‌ ವೇದಿಕೆಗಳ ಮೂಲಕ ಕಿರುಕುಳ ನೀಡುವುದು, ಬೆದರಿಕೆ ಹಾಕುವುದು, ವೈಯಕ್ತಿಕ ದತ್ತಾಂಶಗಳ ದುರ್ಬಳಕೆ ಹಾಗೂ ಡೀಪ್‌ಫೇಕ್‌ ಚಿತ್ರಗಳನ್ನು ಬಳಸಿ ಹೆಣ್ಣು ಮಗುವಿನ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದನ್ನು ತಡೆಗಟ್ಟುವುದು ಮುಖ್ಯ’ ಎಂದರು.

ಸುಪ್ರೀಂ ಕೋರ್ಟ್‌ನ ಬಾಲ ನ್ಯಾಯ ಸಮಿತಿಯು (ಜೆಜೆಸಿ) ಯುನಿಸೆಫ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎಲ್ಲ ಭಾಗೀದಾರರ ವಾರ್ಷಿಕ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ADVERTISEMENT

‘ಬಾಲಕಿಯರ ರಕ್ಷಣೆಗೆ ಸಾಂವಿಧಾನಿಕ ಮತ್ತು ಕಾನೂನಿನ ಖಾತರಿ ಇದ್ದರೂ, ದೇಶದಾದ್ಯಂತ ಅವರಿಗೆ ಮೂಲಭೂತ ಹಕ್ಕುಗಳು ಹಾಗೂ ಸೌಕರ್ಯಗಳನ್ನು ನಿರಾಕರಿಸಲಾಗುತ್ತಿದೆ’ ಎಂದರು.

‘ಹೆಣ್ಣುಮಗು ಸುಲಭವಾಗಿ ದಾಳಿಗೆ ಒಳಗಾಗುವ ಕಾರಣ, ಅವರು ಲೈಂಗಿಕ ಕಿರುಕುಳಕ್ಕೆ ಒಳಗಾಗುವ ಅಪಾಯ ಹೆಚ್ಚು. ಗುಪ್ತಾಂಗ ವಿರೂಪಗೊಳಿಸುವಿಕೆ, ಅಪೌಷ್ಟಿಕತೆ, ಭ್ರೂಣದ ಲಿಂಗ ಪತ್ತೆ ಬಳಿಕ ಗರ್ಭಪಾತ ಮಾಡಿಸುವುದು, ಮಾನವ ಕಳ್ಳಸಾಗಣೆ, ಬಾಲ್ಯವಿವಾಹದಂತಹ ಅಪಾಯಗಳನ್ನು ಕೂಡ ಅವರು ಎದುರಿಸುತ್ತಾರೆ’ ಎಂದು ಸಿಜೆಐ ವಿಶ್ಲೇಷಿಸಿದರು.

ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಅನ್ನಪೂರ್ಣಾದೇವಿ, ಯುನಿಸೆಫ್‌–ಇಂಡಿಯಾ ಪ್ರತಿನಿಧಿ ಸಿಂಥಿಯಾ ಮ್ಯಾಕ್‌ಕ್ಯಾಫ್ರಿ, ನ್ಯಾಯಮೂರ್ತಿ ಹಾಗೂ ಜೆಜೆಸಿ ಅಧ್ಯಕ್ಷೆ ಬಿ.ವಿ.ನಾಗರತ್ನ, ನ್ಯಾಯಮೂರ್ತಿ ಜೆ.ಬಿ.ಪಾರ್ದೀವಾಲಾ ಉಪಸ್ಥಿತರಿದ್ದರು.

ಬಾಲಕಿಯರು ಕೇವಲ ದೈಹಿಕ ಬೆದರಿಕೆಗಳನ್ನು ಎದುರಿಸುತ್ತಿಲ್ಲ. ನಿಯಂತ್ರಣವೇ ಇಲ್ಲದಿರುವ ಡಿಜಿಟಲ್‌ ವೇದಿಕೆಗಳಿಂದಲೂ ಅವರು ಅಪಾಯ ಎದುರಿಸುತ್ತಿದ್ದಾರೆ 
ಬಿ.ಆರ್‌.ಗವಾಯಿ ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.