ADVERTISEMENT

ಗ್ರಂಥಾಲಯ ಆರಂಭಿಸಿದ ಬಾಲಕಿ

ಪುಸ್ತಕಕ್ಕಾಗಿ ಪ್ರಧಾನಿಗೆ ಪತ್ರ ಬರೆದ ಯಶೋದಾ

​ಪ್ರಜಾವಾಣಿ ವಾರ್ತೆ
Published 24 ಜುಲೈ 2019, 19:46 IST
Last Updated 24 ಜುಲೈ 2019, 19:46 IST
ತನ್ನದೇ ಗ್ರಂಥಾಲಯದಲ್ಲಿ ಓದುತ್ತಿರುವ ಯಶೋದಾ
ತನ್ನದೇ ಗ್ರಂಥಾಲಯದಲ್ಲಿ ಓದುತ್ತಿರುವ ಯಶೋದಾ   

ತಿರುವನಂತಪುರ: ಯುವಜನರಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ ಎಂದು ಹಿರಿಯರು ಬೇಸರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಕೇರಳದ ಏಳನೇ ತರಗತಿ ವಿದ್ಯಾರ್ಥಿನಿಯ ಪುಸ್ತಕ ಪ್ರೀತಿ ಗಮನ ಸೆಳೆದಿದೆ.

ಕೊಚ್ಚಿಯ 12 ವರ್ಷದ ಯಶೋದಾ ಡಿ. ಶೆಣೈ ಬರೋಬ್ಬರಿ 3,500 ಪುಸ್ತಕಗಳು ಇರುವ ಗ್ರಂಥಾಲಯವನ್ನೇ ಆರಂಭಿಸಿದ್ದಾಳೆ.

ಈ ಗ್ರಂಥಾಲಯದಲ್ಲಿ ಮಕ್ಕಳು, ಶಿಕ್ಷಕರು ಕೂಡ ಸದಸ್ಯರಾಗಿದ್ದಾರೆ. ವಿವಿಧ ಸಂದರ್ಭಗಳಲ್ಲಿ ಹಿರಿಯರು, ಸ್ನೇಹಿತರಿಂದ ಪುಸ್ತಕಗಳನ್ನು ದೇಣಿಗೆ ಪಡೆದುಕೊಂಡಿರುವ ಯಶೋದಾ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದು ತನ್ನ ಲೈಬ್ರರಿಗೆ ಪುಸ್ತಕ ದೇಣಿಗೆ ನೀಡುವಂತೆ ಕೋರಿದ್ದಾಳೆ. ’ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರಬಹುದು’ ಎಂದು ಆಕೆ ಕಾಯುತ್ತಿದ್ದಾಳೆ.

ADVERTISEMENT

ಆರು ವರ್ಷದ ಬಾಲಕಿಯಾಗಿದ್ದಾಗಲೇ ಯಶೋದಾಗೆ ಓದುವ ಹವ್ಯಾಸವಿತ್ತು. ‘ಮೂರು ವರ್ಷದವಳಿದ್ದಾಗಲೇ ನಾನು ಅಣ್ಣ ಅಚ್ಯುತನ ಜೊತೆಗೆ ಲೈಬ್ರರಿಗೆ ಹೋಗುತ್ತಿದ್ದೆ. ಆದ್ದರಿಂದ ಓದುವ ಹವ್ಯಾಸ ಬೆಳೆದಿತ್ತು. ಒಮ್ಮೆ ಪುಸ್ತಕವೊಂದನ್ನು ವಾಪಸ್‌ ಕೊಡುವಾಗ ತಡವಾದುದಕ್ಕೆ ನನಗೆ ದಂಡ ವಿಧಿಸಿದರು. ಹೀಗೆ ದಂಡ ಶುಲ್ಕ ಕಟ್ಟಲು ಸಾಧ್ಯವಾಗದೇ ಇರುವವರ ಬಗ್ಗೆ ನನಗೆ ಯೋಚನೆಯಾಯಿತು’ ಎಂದು ತನ್ನ ಅನುಭವ ಹೇಳಿಕೊಂಡಿದ್ದಾಳೆ.

ಕಲಾವಿದರಾದ ತಂದೆ ದಿನೇಶ್‌ ಆರ್‌. ಶೆಣೈ ಮತ್ತು ತಾಯಿ ಬ್ರಹ್ಮಜಾ ನೆರವಿನಿಂದ ಗ್ರಂಥಾಲಯ ಆರಂಭಿಸಿದಳು. ಸಾಮಾಜಿಕ ಜಾಲತಾಣದಲ್ಲಿ ಮಗಳ ಕನಸಿನ ಬಗ್ಗೆ ಪ್ರಸ್ತಾಪಿಸಿದಾಗ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಯಿತು ಎಂದು ದಿನೇಶ್‌ ಹೇಳಿದ್ದಾರೆ. ಮನೆಯ ಒಂದು ಭಾಗದಲ್ಲಿ ಆರಂಭವಾದ ಗ್ರಂಥಾಲಯದಲ್ಲಿ ಈಗ ಇಂಗ್ಲಿಷ್‌, ಹಿಂದಿ, ಮಲಯಾಳ, ಸಂಸ್ಕೃತ, ಕೊಂಕಣಿ ಭಾಷೆಯ ಪುಸ್ತಕಗಳು ಇವೆ. ಪುಸ್ತಕಗಳನ್ನು ಸದಸ್ಯರಿಗೆ ಓದಲು ಉಚಿತವಾಗಿ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.