ಸಾಂದರ್ಭಿಕ ಚಿತ್ರ
ನವದೆಹಲಿ: ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಬೋರ್ಡ್ ಪರೀಕ್ಷೆಯ ಸಮಯದಲ್ಲಿ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ನ್ಯಾಪ್‌ಕಿನ್ ಲಭ್ಯವಾಗುವಂತೆ ಮಾಡಬೇಕು ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಗುರುವಾರ ಸಲಹೆ ನೀಡಿದೆ.
ಋತುಚಕ್ರದ ನೈರ್ಮಲ್ಯ ನಿರ್ವಹಣೆಯು ಹೆಣ್ಣುಮಕ್ಕಳ ಒಟ್ಟಾರೆ ಯೋಗಕ್ಷೇಮಕ್ಕೆ ಸಂಬಂಧಿಸಿದ ಮಹತ್ವದ ವಿಷಯವಾಗಿದೆ ಮತ್ತು ಅದು ಆಕೆಯ ಶೈಕ್ಷಣಿಕ ಸಾಧನೆಗೆ ಅಡ್ಡಿಯಾಗಬಾರದು ಎಂದು ಹೇಳಿರುವ ಸಚಿವಾಲಯವು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಲೆಗಳು, ಸಿಬಿಎಸ್‌ಇ (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್), ಕೆವಿಎಸ್ (ಕೇಂದ್ರೀಯ ವಿದ್ಯಾಲಯ ಸಂಘಟನ್) ಹಾಗೂ ಎನ್‌ವಿಎಸ್‌ಗೆ (ನವೋದಯ ವಿದ್ಯಾಲಯ ಸಮಿತಿ) ಸುತ್ತೋಲೆ ಹೊರಡಿಸಿದೆ.
‘10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಯ ಸಮಯದಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ಉಚಿತವಾಗಿ ಲಭ್ಯವಿರುವುದನ್ನು ಖಚಿತಪಡಿಸಬೇಕು. ಋತುಚಕ್ರದ ನೌರ್ಮಲ್ಯ ಕಾಪಾಡಲು ಅಗತ್ಯ ಎನಿಸಿದಾಗ ಹೆಣ್ಣುಮಕ್ಕಳಿಗೆ ಪರೀಕ್ಷೆಯ ಅವಧಿಯಲ್ಲಿ ಶೌಚಾಲಯಕ್ಕೆ ತೆರಳಲು ವಿರಾಮ ನೀಡಬೇಕು’ ಎಂದು ಸಚಿವಾಲಯ ಹೇಳಿದೆ.
‘ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗೆ ಮುಟ್ಟಿನ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸಲು ಶೀಘ್ರದಲ್ಲೇ ಶೈಕ್ಷಣಿಕ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು’ ಎಂದು ತಿಳಿಸಿದೆ.
ಮುಟ್ಟಿನ ನೈರ್ಮಲ್ಯದ ಅಗತ್ಯತೆಗಳ ವಿಚಾರದಲ್ಲಿ ಹೆಣ್ಣುಮಕ್ಕಳನ್ನು ಘನತೆಯಿಂದ ನಡೆಸಿಕೊಳ್ಳುವುದು ಮತ್ತು ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಿ, ಶೈಕ್ಷಣಿಕ ಗುರಿ ಸಾಧಿಸಲು ಅವರಿಗೆ ನೆರವಾಗುವುದರ ಮಹತ್ವವನ್ನು ಸಚಿವಾಲಯ ಒತ್ತಿಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.