ಮುಂಬೈ: 20 ವರ್ಷದ ವ್ಯಕ್ತಿಯೊಬ್ಬರನ್ನು ಬಂಧಿಸುವಂತೆ ಜಲಗಾಂವ್‌ನ ಜಿಲ್ಲಾ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿರುವ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠವು, ವ್ಯಕ್ತಿಗೆ ₹2 ಲಕ್ಷ ಪರಿಹಾರ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿದೆ.
ಅಲ್ಲದೇ, ಬಂಧನ ಆದೇಶ ಹೊರಡಿಸಿದ್ದ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ವೇತನದಲ್ಲಿ ಈ ಪರಿಹಾರ ಮೊತ್ತವನ್ನು ವಸೂಲಿ ಮಾಡುವಂತೆಯೂ ಆದೇಶಿಸಿದೆ.
ತಮ್ಮನ್ನು ಬಂಧಿಸುವಂತೆ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದ್ದನ್ನು ಪ್ರಶ್ನಿಸಿ, ದೀಕ್ಷಾಂತ ಸಪ್ಕಾಲೆ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ವಿಭಾ ಕಂಕಣವಾಡಿ ಹಾಗೂ ಹಿತೇನ್ ವೆನೆಗಾವ್ಕರ್ ಅವರು ಇದ್ದ ನ್ಯಾಯಪೀಠ ನಡೆಸಿತು.
‘ನನ್ನನ್ನು ಬಂಧಿಸುವ ಕುರಿತು ಕಳೆದ ವರ್ಷ ಜುಲೈನಲ್ಲಿ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿತ್ತು. ಆ ಆದೇಶವನ್ನು ಆಗ ತಕ್ಷಣವೇ ನನಗೆ ನೀಡಿರಲಿಲ್ಲ. ಬೇರೊಂದು ಪ್ರಕರಣದಲ್ಲಿ ಜೈಲಿನಲ್ಲಿದ್ದ ನಾನು ಜಾಮೀನು ಪಡೆದು ಮೇನಲ್ಲಿ ಹೊರಗೆ ಬಂದಾಗ, ಈ ಬಂಧನ ಆದೇಶವನ್ನು ನನಗೆ ನೀಡಲಾಯಿತಲ್ಲದೇ, ನನ್ನನ್ನು ಮತ್ತೊಮ್ಮೆ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ’ ಎಂದು ದೀಕ್ಷಾಂತ ಅವರು ಮೇಲ್ಮನವಿಯಲ್ಲಿ ವಿವರಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ, ‘ಬಂಧನ ಆದೇಶವನ್ನು ಹಲವು ತಿಂಗಳು ಕಾಲ ಜಾರಿ ಮಾಡದೇ ಇರಿಸಿ, ವ್ಯಕ್ತಿಯು ಜೈಲಿನಿಂದ ಹೊರಬಂದ ಬಳಿಕ ಆತನಿಗೆ ನೀಡಲಾಗಿದೆ. ಈ ಮೂಲಕ ಅರ್ಜಿದಾರನನ್ನು ಅಕ್ರಮವಾಗಿ ಬಂಧನಕ್ಕೆ ಒಳಪಡಿಸಿದಂತಾಗಿದೆ. ಇದರಿಂದ ಆತನ ಬದುಕುವ ಹಾಗೂ ವೈಯಕ್ತಿಕ ಸ್ವಾತಂತ್ರ್ಯ ಎಂಬ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ’ ಎಂದು ಅಕ್ಟೋಬರ್ 1ರಂದು ಹೊರಡಿಸಿರುವ ಆದೇಶದಲ್ಲಿ ನ್ಯಾಯಪೀಠ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.