ADVERTISEMENT

ಮಕ್ಕಳ ಉತ್ತಮ ಭವಿಷ್ಯಕ್ಕೆ ಎಎಪಿಗೆ ಮತ ಹಾಕಿ: ಹಿಮಾಚಲ ಪ್ರದೇಶದಲ್ಲಿ ಕೇಜ್ರಿವಾಲ್‌

ಪಿಟಿಐ
Published 11 ಜೂನ್ 2022, 11:16 IST
Last Updated 11 ಜೂನ್ 2022, 11:16 IST
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌   

ಶಿಮ್ಲಾ: ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ಜೊತೆಗೆ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಾರ್ಟಿಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ.

ಹಮಿರ್‌ಪುರ್‌ ಜಿಲ್ಲೆಯ ಟೌನ್‌ಹಾಲ್‌ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್‌, ದೆಹಲಿಯಲ್ಲಿ ಎಎಪಿ ಸರ್ಕಾರವು ಶಿಕ್ಷಣ ವ್ಯವಸ್ಥೆಯಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತಂದಿದೆ. ಇದರ ಪರಿಣಾಮ ಸುಮಾರು 16 ಲಕ್ಷ ವಿದ್ಯಾರ್ಥಿಗಳು 1,100 ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ ಎಂದರು.

'ಹಿಮಾಚಲ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ 8.5 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಮೂಲಕ ಅವರು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದಿದ್ದರೆ ಎಎಪಿಗೆ ಒಂದು ಅವಕಾಶ ಕೊಡಿ' ಎಂದು ಕೇಜ್ರಿವಾಲ್‌ ತಿಳಿಸಿದ್ದಾರೆ.

ADVERTISEMENT

'ಕಳೆದ 7 ವರ್ಷಗಳಲ್ಲಿ ದೆಹಲಿ ಸರ್ಕಾರವು ₹ 80,000-85,000 ಕೋಟಿ ವ್ಯಯಿಸಿದೆ. ಒಟ್ಟು ಬಜೆಟ್‌ನಲ್ಲಿ ಶೇಕಡಾ 25ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡಲಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಮುಖಂಡರಿಗೆ ಧೈರ್ಯವಿದ್ದರೆ ಶಿಕ್ಷಣ ಮತ್ತು ಉದ್ಯೋಗದ ಹೆಸರಲ್ಲಿ ಮತ ಕೇಳುವಂತೆ ಹೇಳಿ' ಎಂದು ಕೇಜ್ರಿವಾಲ್‌ ಆಗ್ರಹಿಸಿದ್ದಾರೆ.

'ನಾನು ಇಲ್ಲಿಗೆ ಶಿಕ್ಷಣ ಮತ್ತು ಆರೋಗ್ಯದ ಹೆಸರಿನಲ್ಲಿ ಮತ ಕೇಳಲು ಬಂದಿದ್ದೇನೆ. ನಿಮ್ಮ ಮಕ್ಕಳು ಉತ್ತಮ ಭವಿಷ್ಯ ಹೊಂದಬೇಕು ಎಂದು ನಿರೀಕ್ಷಿಸಿದ್ದರೆ ಎಎಪಿಗೆ ಒಂದು ಅವಕಾಶವನ್ನು ಕೊಡಿ. ನಾವಷ್ಟು ಕೆಟ್ಟವರಲ್ಲ' ಎಂದು ದೆಹಲಿ ಸಿಎಂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.