ADVERTISEMENT

ಗೋವಾ ಏಕರೂಪ ನಾಗರಿಕ ಸಂಹಿತೆ ಎಲ್ಲ ರಾಜ್ಯಗಳಿಗೆ ಮಾದರಿ: ಸಿಎಂ ಪ್ರಮೋದ್‌ ಸಾವಂತ್‌

ಪೋರ್ಚುಗೀಸ್‌ ಆಡಳಿತ ಕಾಲದಿಂದ ಗೋವಾದಲ್ಲಿ ಯುಸಿಸಿ ಜಾರಿಯಲ್ಲಿದೆ

ಪಿಟಿಐ
Published 8 ಮೇ 2022, 14:41 IST
Last Updated 8 ಮೇ 2022, 14:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಗೋವಾದಲ್ಲಿ ಜಾರಿಯಲ್ಲಿರುವ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಯಾವುದೇ ಕೋಮು ಪ್ರಕ್ಷುಬ್ಧತೆ ಸೃಷ್ಟಿಸಿಲ್ಲ. ಯುಸಿಸಿ ಜಾರಿಗೆ ಚಿಂತನೆ ನಡೆಸಿರುವ ರಾಜ್ಯಗಳು ‌ಗೋವಾವನ್ನು ಮಾದರಿಯಾಗಿ ಪರಿಗಣಿಸಬಹುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಸಲಹೆ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ಅವರು, ‘ಗೋವಾ ವಿಮೋಚನೆ ಪಡೆದಾಗಿನಿಂದ ಇಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಲ್ಲಿದೆ. ಗೋವಾದ ಒಟ್ಟು ಜನಸಂಖ್ಯೆಯಲ್ಲಿ ಶೇ 27ರಷ್ಟು ಕ್ರಿಶ್ಚಿಯನ್ನರು, ಶೇ 6ರಷ್ಟು ಮುಸ್ಲಿಮರು ಸೇರಿದಂತೆ ಮೂರನೇ ಒಂದರಷ್ಟು ಜನರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. ಆದಾಗ್ಯೂ ಇಲ್ಲಿ ಯಾವುದೇ ದೂರು ಅಥವಾ ಸಮಸ್ಯೆ ಉದ್ಭವವಾಗಿಲ್ಲ’ ಎಂದು ತಿಳಿಸಿದ್ದಾರೆ.

ಇದೇ ವೇಳೆ, ‘ಕಳೆದ 10 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದೇನೆ. 3 ವರ್ಷದಿಂದ ಗೋವಾ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಅನುಭವದಲ್ಲಿ ಹೇಳುವುದಾದರೆ ಯುಸಿಸಿಯಿಂದ ಯಾರಿಗೂ ಅನ್ಯಾಯವಾಗುವುದಿಲ್ಲ. ಬದಲಾಗಿ ಎಲ್ಲಾ ಧರ್ಮದ ಮಹಿಳೆಯರಿಗೆ ಸಮಾನ ಹಕ್ಕುಗಳು ಲಭ್ಯವಾಗುತ್ತವೆ. ಈ ನಿಟ್ಟಿನಲ್ಲಿ ಗೋವಾ ಎಲ್ಲಾ ರಾಜ್ಯಗಳಿಗೆ ಮಾದರಿ ಎಂದು ಭಾವಿಸುತ್ತೇನೆ’ ಎಂದು ಹೇಳಿದರು.

ADVERTISEMENT

ವಿವಾಹ, ವಿಚ್ಛೇದನ, ಉತ್ತರಾಧಿಕಾರ ಮುಂತಾದ ವಿಷಯಗಳಲ್ಲಿ ಧರ್ಮಾಧಾರಿತ ಕಾನೂನುಗಳನ್ನು ಕೈಬಿಟ್ಟು, ಎಲ್ಲಾ ಜಾತಿ, ಧರ್ಮಗಳಿಗೆ ಒಂದೇ ಕಾನೂನು ಅನ್ವಯವಾಗುವಂತೆ ಮಾಡುವುದೇ ಏಕರೂಪ ನಾಗರಿಕ ಸಂಹಿತೆ. 1867ರ ಪೋರ್ಚುಗೀಸ್ ಆಡಳಿತ ಕಾಲದಿಂದಲೂ ಗೋವಾದಲ್ಲಿ ಯುಸಿಸಿ ಜಾರಿಯಲ್ಲಿದೆ. ಇತ್ತೀಚೆಗೆ ಬಿಜೆಪಿ ಆಡಳಿತವಿರುವ ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಉತ್ತರ ಪ್ರದೇಶ ರಾಜ್ಯಗಳೂ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವ ಪ್ರಸ್ತಾಪವನ್ನು ಮುಂದಿಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.