ADVERTISEMENT

ತರುಣ್ ತೇಜ್‌ಪಾಲ್ ಪ್ರಕರಣ: ಇದೇ 19ಕ್ಕೆ ತೀರ್ಪು

ಪಿಟಿಐ
Published 12 ಮೇ 2021, 6:45 IST
Last Updated 12 ಮೇ 2021, 6:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪಣಜಿ: ತೆಹಲ್ಕಾದ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್‌ಪಾಲ್ ವಿರುದ್ಧ ಮಾಡಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ತೀರ್ಪನ್ನು ಇದೇ 19 ರಂದು ಪ್ರಕಟಿಸುವುದಾಗಿ ಗೋವಾದ ಸೆಷನ್ಸ್ ನ್ಯಾಯಾಲಯ ಬುಧವಾರ ತಿಳಿಸಿದೆ.

2013ರಲ್ಲಿ ಗೋವಾದ ಐಷಾರಾಮಿ ಹೋಟೆಲ್‌ನ ಲಿಫ್ಟ್‌ನೊಳಗೆ ಮಹಿಳಾ ಸಹೋದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ತರುಣ್ ಅವರ ಮೇಲಿದೆ.

ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಈ ಪ್ರಕರಣದ ಕುರಿತು ಏಪ್ರಿಲ್ 27ರಂದು ತೀರ್ಪು ಪ್ರಕಟಿಸಬೇಕಿತ್ತು. ಆದರೆ ನ್ಯಾಯಾಧೀಶರಾದ ಕ್ಷಮಾ ಜೋಶಿ ಅವರನ್ನು ತೀರ್ಪು ನೀಡುವ ದಿನಾಂಕವನ್ನು ಮೇ 12ಕ್ಕೆ ಮುಂದೂಡಿದ್ದರು.

ADVERTISEMENT

ಕೋವಿಡ್‌–19ರ ಪಿಡುಗಿನ ಕಾರಣದಿಂದ ಸಿಬ್ಬಂದಿ ಕೊರತೆ ಎದುರಾಗಿದೆ. ನ್ಯಾಯಾಲಯವು ಕೇವಲ ಶೇ 15ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ ತೇಜ್‌ಪಾಲ್‌ ಪ್ರಕರಣದ ತೀರ್ಪು ಪ್ರಕಟಿಸುವ ದಿನಾಂಕವನ್ನು ಮತ್ತೆ ಮುಂದೂಡಲಾಗಿದೆ ಎಂದು ನ್ಯಾಯಾಲಯ ಬುಧವಾರ ತಿಳಿಸಿದೆ.

ಗೋವಾ ಪೊಲೀಸರು 2013ರ ನವೆಂಬರ್‌ನಲ್ಲಿ ತೇಜ್‌ಪಾಲ್ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸಿದ್ದರು. ಅವರು 2014ರ ಮೇ ತಿಂಗಳಿನಿಂದ ಜಾಮೀನಿನ ಮೇಲೆ ಹೊರಗಿದ್ದಾರೆ. ಗೋವಾ ಅಪರಾಧ ವಿಭಾಗವು ಚಾರ್ಜ್‌ಶೀಟ್ ಸಲ್ಲಿಸಿತ್ತು.

ತನ್ನ ವಿರುದ್ಧದ ಆರೋಪಗಳಿಗೆ ತಡೆ ಕೋರಿ ತೇಜ್‌ಪಾಲ್‌ ಅವರು ಈ ಹಿಂದೆ ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್‌ ಅವರ ಅರ್ಜಿಯನ್ನು ವಜಾಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.