
ಗೋವಾ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಫಿಲಂ ಬಜಾರ್ ಉದ್ಘಾಟಿಸಿದ ಕೇಂದ್ರ ಸಚಿವ ಎಲ್ ಮುರುಗನ್
- ವೆಬ್‌ಸೈಟ್ ಚಿತ್ರ (IIFFI Goa)
ಪಣಜಿ: ಐವತ್ತಾರನೆಯ ಭಾರತದ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ ಗುರುವಾರ ಸಂಜೆ ಆರಂಭವಾಯಿತು
ಚಿತ್ರೋತ್ಸವದ ಕೇಂದ್ರ ಸ್ಥಾನವಾದ ಹಳೇ ಮೆಡಿಕಲ್ ಕಾಲೇಜು (ಐನಾಕ್ಸ್ ಚಿತ್ರಮಂದಿರ) ಮುಂಭಾಗದಲ್ಲಿ ಕೆಂಪುಹಾಸಿನ ಮೇಲೆ ನಿರ್ಮಿಸಲಾದ ವಿಶೇಷ ವೇದಿಕೆಯಲ್ಲಿ ಕೇಂದ್ರ ಪ್ರಸಾರ ಖಾತೆ ಸಚಿವ ಎಲ್ ಮುರುಗನ್, ಗೋವಾ ರಾಜ್ಯಪಾಲ ಅಶೋಕ ಗಜಪತಿರಾಜು, ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಸ್ಯವೊಂದಕ್ಕೆ ನೀರೆರೆಯುವ ಮೂಲಕ ಚಿತ್ರೋತ್ಸವ ಮತ್ತು ಮೆರವಣಿಗೆಯನ್ನು ಸಾಂಕೇತಿಕವಾಗಿ ಉದ್ಘಾಟಿಸಿ ಚಿತ್ರೋತ್ಸಕ್ಕೆ ಶುಭ ಕೋರಿದರು.
ಸುಮಾರು ಅರ್ಧ ತಾಸು ನಡೆದ ಸಮಾರಂಭದ ನಂತರ ಮೆರವಣಿಗೆ ಆರಂಭವಾಯಿತು. ಇದೇ ಸಂದರ್ಭದಲ್ಲಿ ತೆಲುಗು ನಟ ನಂದಮೂರಿ ಬಾಲಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಕೇಂದ್ರ ಸಚಿವ ಶ್ರೀಪಾದ ನಾಯ್ಕ್, ಗೋವಾ ಸರ್ಕಾರದ ಸಚಿವರು, ವಾರ್ತಾ ಸಚಿವಾಲಯದ ಹಿರಿಯ ಅಧಿಕಾರಿಗಳು, ಭಾರತೀಯ ಮತ್ತು ವಿದೇಶಿ ಸಿನಿಮಾ ಗಣ್ಯರು ಮತ್ತು ಚಿತ್ರೋತ್ಸವದ ಪ್ರತಿನಿಧಿಗಳು ಭಾಗವಹಿಸಿದ್ದರು.
ಉದ್ಘಾಟನೆ ನಂತರ ನಡೆದ ಮೆರವಣಿಗೆಯಲ್ಲಿ ದೇಶದ ಹಲವಾರು ರಾಜ್ಯಗಳ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಿಂಬಿಸುವ ಕಲಾ ತಂಡಗಳು, ನೃತ್ಯಗಾರರು ಮತ್ತು ಹಾಡುಗಾರರು ತಮ್ಮ ವಾದ್ಯ ಮೇಳಗಳೊಂದಿಗೆ ಭಾಗವಹಿಸಿ ಚಿತ್ರೋತ್ಸವದ ಸಂಭ್ರಮವನ್ನು ಹೆಚ್ಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.