ಪಣಜಿ: ಗೋವಾ ರಾಜ್ಯಕ್ಕೆ ಭೇಟಿ ನೀಡುವ ವಿದೇಶಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿತವಾಗಿದ್ದು, ಇದಕ್ಕೆ ಬೀಚ್‌ಗಳ ಬಳಿಯ ಗೂಡಂಗಡಿಗಳಲ್ಲಿ ನಡೆಯುತ್ತಿರುವ ಇಡ್ಲಿ– ಸಾಂಬಾರ್ ಮಾರಾಟ ಪ್ರಮುಖ ಕಾರಣ ಎಂದು ಇಲ್ಲಿನ ಬಿಜೆಪಿ ಶಾಸಕ ಮೈಕೆಲ್ ಲೋಬೊ ಆರೋಪಿಸಿದರು.
ಕರಾವಳಿ ರಾಜ್ಯ ಎದುರಿಸುತ್ತಿರುವ ಈ ಸಮಸ್ಯೆಗೆ ಕೇವಲ ಸರ್ಕಾರವನ್ನು ದೂಷಿಸುವುದು ಸರಿಯಲ್ಲ, ಏಕೆಂದರೆ ಎಲ್ಲ ಭಾಗಿದಾರರು ಇದಕ್ಕೆ ಸಮಾನ ಜವಾಬ್ದಾರರಾಗಿದ್ದಾರೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗೋವಾದ ಜನರು ಬೀಚ್ ಬಳಿಯ ತಮ್ಮ ಗೂಡಂಗಡಿಗಳನ್ನು ಬೇರೆಡೆಯ ಉದ್ಯಮಿಗಳಿಗೆ ಬಾಡಿಗೆಗೆ ನೀಡಿದ್ದಾರೆ. ಇವುಗಳಲ್ಲಿ ಬೆಂಗಳೂರಿನ ಕೆಲವರು ‘ವಡಾ ಪಾವ್’ ಮಾರುತ್ತಿದ್ದರೆ, ಇನ್ನೂ ಕೆಲವರು ಇಡ್ಲಿ–ಸಾಂಬಾರ್ ಮಾರುತ್ತಿದ್ದಾರೆ. ಈ ಕಾರಣಗಳಿಂದಾಗಿ ಎರಡು ವರ್ಷಗಳಿಂದ ಗೋವಾಗೆ ವಿದೇಶಿ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿದೆ ಎಂದು ಅವರು ಅಭಿಪ್ರಾಯಪಟ್ಟರು.
ಆದರೆ, ದಕ್ಷಿಣ ಭಾರತದ ಜನಪ್ರಿಯ ಉಪಹಾರ ಖಾದ್ಯವಾದ ಇಡ್ಲಿ– ಸಾಂಬಾರ್ ಹೇಗೆ ರಾಜ್ಯದ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರುತ್ತಿದೆ ಎಂಬುದನ್ನು ಶಾಸಕರು ವಿವರಿಸಲಿಲ್ಲ.
ವಿದೇಶಿ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿರುವುಕ್ಕೆ ಕಾರಣಗಳೇನು ಎಂಬುದರ ಕುರಿತು ಪ್ರವಾಸೋದ್ಯಮ ಇಲಾಖೆ ಮತ್ತು ಇತರ ಭಾಗಿದಾರರು ಜಂಟಿ ಸಭೆ ನಡೆಸಿ ಅಧ್ಯಯನ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.