ADVERTISEMENT

ಗೋವಾ ಅಗ್ನಿ ಅವಘಢ: ಬರ್ಚ್‌ ಬೈ ನೈಟ್‌ಕ್ಲಬ್‌ ಮಾಲೀಕರ ಜಾಮೀನು ಅರ್ಜಿ ವಜಾ

ಪಿಟಿಐ
Published 11 ಡಿಸೆಂಬರ್ 2025, 13:04 IST
Last Updated 11 ಡಿಸೆಂಬರ್ 2025, 13:04 IST
<div class="paragraphs"><p>ಸೌರಭ್‌ ಹಾಗೂ ಗೌರವ್‌ ಲೂಥ್ರಾ</p></div>

ಸೌರಭ್‌ ಹಾಗೂ ಗೌರವ್‌ ಲೂಥ್ರಾ

   

ಪಣಜಿ: 25 ಜನರನ್ನು ಬಲಿಪಡೆದ ಉತ್ತರ ಗೋವಾದ ನೈಟ್‌ಕ್ಲಬ್‌ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಥಾಯ್ಲೆಂಡ್‌ಗೆ ಪರಾರಿಯಾಗಿದ್ದ ಕ್ಲಬ್‌ ಮಾಲೀಕರಾದ ಸೌರಭ್‌ ಹಾಗೂ ಗೌರವ್‌ ಲೂಥ್ರಾ ಸಹೋದರರನ್ನು ಅಲ್ಲಿನ ಪೊಲೀಸರು ಫುಕೆಟ್‌ನಲ್ಲಿ ಗುರುವಾರ ಬಂಧಿಸಿ ಭಾರತಕ್ಕೆ ಕರೆತರಲಾಗುತ್ತಿದೆ.

ಇನ್ನು, ತಮ್ಮ ಬಂಧನದ ವಿರುದ್ಧ ದೆಹಲಿ ಹೈಕೋರ್ಟ್‌ಗೆ ಲೂಥ್ರಾ ಸಹೋದರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ವಜಾಗೊಂಡಿದೆ.

ADVERTISEMENT

ಹೀಗಾಗಿ ಸೌರಭ್‌ ಹಾಗೂ ಗೌರವ್‌ ಲೂಥ್ರಾ ಸಹೋದರರನ್ನು ಭಾರತಕ್ಕೆ ಬಂದ ತಕ್ಷಣವೇ ಗೋವಾ ಪೊಲೀಸರು ವಶಪಡಿಸಿಕೊಂಡು ವಿಚಾರಣೆಗೆ ಒಳಪ‍ಡಿಸಲಿದ್ದಾರೆ.

ಇನ್ನೊಂದೆಡೆ ನೈಟ್‌ಕ್ಲಬ್‌ ಜಾಗವನ್ನು ಗೋವಾ ಸರ್ಕಾರ ತನ್ನ ಸುಪರ್ಧಿಗೆ ತೆಗೆದುಕೊಂಡು ಆದೇಶ ಹೊರಡಿಸಿದೆ. ಅಷ್ಟೇ ಅಲ್ಲದೇ ತನಿಖೆಗೆ ಸಹಕಾರ ನೀಡದ ಸ್ಥಳೀಯ ಗ್ರಾಮ ಪಂಚಾಯಿತಿಯ ಅಧ್ಯಕ್ಷನನ್ನು ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿ ಆದೇಶಿಸಿದೆ.

ಡಿ.6ರಂದು ರಾತ್ರಿ ಅಗ್ನಿ ಅವಘಡ ಸಂಭವಿಸಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಇವರಿಬ್ಬರು ಥಾಯ್ಲೆಂಡ್‌ಗೆ ಪರಾರಿಯಾಗಿದ್ದರು. ಆರೋಪಿಗಳನ್ನು ವಶಕ್ಕೆ ಪಡೆಯಲು ಇಂಟರ್‌ಫೋಲ್‌ ಬ್ಲ್ಯೂ ಕಾರ್ನರ್‌ ನೋಟಿಸ್ ಜಾರಿ ಮಾಡಿತ್ತು. ಭಾರತ ಸರ್ಕಾರದ ಮನವಿ ಮೇರೆಗೆ ಇವರಿಬ್ಬರನ್ನು ಬಂಧಿಸಲಾಗಿದೆ ಎಂದು ಥಾಯ್ಲೆಂಡ್‌ ಪೊಲೀಸರು ಖಚಿತಪಡಿಸಿದ್ದಾರೆ.

‘ಲೂಥ್ರಾ ಸಹೋದರರನ್ನು 24 ಗಂಟೆಗಳ ಒಳಗಾಗಿ ಭಾರತಕ್ಕೆ ಕರೆತರಲು ಪ್ರಕ್ರಿಯೆಗಳು ನಡೆಯುತ್ತಿವೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಉತ್ತರ ಗೋವಾದ ಅರ್ಪೋರಾ ಗ್ರಾಮದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ‘ಬರ್ಚ್‌ ಬೈ ರೋಮಿಯೊ ಲೇನ್‌ ನೈಟ್‌ ಕ್ಲಬ್‌’ ಕಟ್ಟಡವನ್ನು ಗೋವಾ ಪ್ರವಾಸೋದ್ಯಮ ಇಲಾಖೆ ಈಗಾಗಲೇ ನೆಲಸಮಗೊಳಿಸದೆ. ಈ ನೈಟ್‌ಕ್ಲಬ್‌ ಲೂಥ್ರಾ ಸಹೋದರರ ಒಡೆತನಕ್ಕೆ ಸೇರಿದ ಮೂರನೇ ಆಸ್ತಿಯಾಗಿದೆ.

ನೈಟ್‌ಕ್ಲಬ್‌ನಲ್ಲಿ ಅಗ್ನಿ ಆಕಸ್ಮಿಕ ನಡೆದಾಗ ಪೊಲೀಸರು, ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದರೆ, ಲೂಥ್ರಾ ಸಹೋದರರು ತಡರಾತ್ರಿ 1.17ರ ಸುಮಾರಿಗೆ ಟ್ರಾವೆಲ್‌ ಪೋರ್ಟಲ್‌ ಮೂಲಕ ಟಿಕೆಟ್‌ ಕಾಯ್ದಿರಿಸಿ, ಇಂಡಿಗೊ ವಿಮಾನದ ಮೂಲಕ ಥಾಯ್ಲೆಂಡ್‌ಗೆ ಪ್ರಯಾಣಿಸಿದ್ದರು.

ಪಟಾಕಿ, ಸ್ಮೋಕ್‌ ಜನರೇಟರ್‌ ಬಳಕೆ ನಿಷೇಧ: ಅಗ್ನಿ ಅವಘಡದ ಬೆನ್ನಲ್ಲೇ, ಹೋಟೆಲ್‌, ಬಾರ್‌, ರೆಸ್ಟೊರೆಂಟ್‌, ನೈಟ್‌ಕ್ಲಬ್‌ ಸೇರಿದಂತೆ ಪ್ರವಾಸಿಗರು ಸೇರುವ ಸ್ಥಳಗಳಲ್ಲಿ ಪಟಾಕಿ, ಸ್ಪಾರ್ಕ್ಲರ್ಸ್‌ ಸೇರಿದಂತೆ ಬೆಳಕು, ಶಾಖ, ಹೊಗೆಯನ್ನುಂಟು ರಾಸಾಯನಿಕ ವಸ್ತುಗಳ ಬಳಕೆಯನ್ನು ಉತ್ತರ ಗೋವಾ ಜಿಲ್ಲಾಡಳಿತ ನಿಷೇಧಿಸಿದೆ. ಇಂತಹ ವಸ್ತುಗಳನ್ನು ಸುಡುವುದು, ಎಸೆಯುವುದು ಅಥವಾ ಹೊಗೆಯನ್ನು ಸೃಷ್ಟಿಸಲು ಸ್ಮೋಕ್‌ ಜನರೇಟರ್‌ಗಳ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.