ADVERTISEMENT

ಗೋವಾ ರಾಜಕೀಯ: ‘ಆಪರೇಷನ್ ಕೆಸರು’ ಎಂದ ಕಾಂಗ್ರೆಸ್

ಪಿಟಿಐ
Published 14 ಸೆಪ್ಟೆಂಬರ್ 2022, 19:31 IST
Last Updated 14 ಸೆಪ್ಟೆಂಬರ್ 2022, 19:31 IST
   

ನವದೆಹಲಿ: ಗೋವಾದಲ್ಲಿ ಪಕ್ಷದ ಎಂಟು ಶಾಸಕರು ಬಿಜೆಪಿಗೆ ಸೇರ್ಪಡೆಯಾದ ವಿದ್ಯಮಾನವನ್ನು ‘ಅಪರೇಷನ್ ಕೆಸರು’ (ಆಪರೇಷನ್‌ ಕಿಚಡ್‌) ಎಂದು ಕಾಂಗ್ರೆಸ್ ಕರೆದಿದೆ. ಪಕ್ಷ ಹಮ್ಮಿಕೊಂಡಿರುವ ‘ಭಾರತ ಒಗ್ಗೂಡಿಸಿ’ ಯಾತ್ರೆಯು ಭಾರಿ ಯಶಸ್ಸು ಕಾಣುತ್ತಿರುವುದರಿಂದ ಗೊಂದಲಕ್ಕೆ ಒಳಗಾಗಿರುವ ಬಿಜೆಪಿ, ಶಾಸಕರ ಖರೀದಿ ಪ್ರಕ್ರಿಯೆಯನ್ನು ತುರ್ತಾಗಿ ಮಾಡಿ ಮುಗಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

‘ಯಾತ್ರೆಯನ್ನು ಸ್ಥಗಿತಗೊಳಿಸಲು ನಿತ್ಯವೂ ಒಂದಲ್ಲಾ ಒಂದು ಅಡೆತಡೆಗಳನ್ನು ಬಿಜೆಪಿ ಒಡ್ಡುತ್ತಿದೆ. ಆದರೆ ಬಿಜೆಪಿಯ ಇಂತಹ ಕ್ಷುಲ್ಲಕ ತಂತ್ರಗಳಿಗೆ ಪಕ್ಷ ಬಗ್ಗುವುದಿಲ್ಲ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಬುಧವಾರ ಹೇಳಿದ್ದಾರೆ. ಜೈರಾಮ್ ಮಾತಿಗೆ ದನಿಗೂಡಿಸಿರುವ ಪಕ್ಷದ ಮುಖಂಡ ಪವನ್ ಖೇರಾ, ಕರಾವಳಿ ರಾಜ್ಯದಲ್ಲಿ ಬಿಜೆಪಿಯು ‘ಆಪರೇಷನ್ ಕೆಸರು’ ಯೋಜನೆಯನ್ನು ಸಂಘಟಿಸಿದೆ ಎಂದು ಹೇಳಿದ್ದಾರೆ.

ಈ ಮೂಲಕ ಬಿಜೆಪಿ ಕೇವಲ ‘ಒಡೆಯುವ’ ಪಕ್ಷ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಆರೋಪಿಸಿರುವ ಖೇರಾ, ದೇಶದ ಜನರು ಇದನ್ನು ನೋಡುತ್ತಿದ್ದಾರೆ ಎಂಬುದು ಬಿಜೆಪಿಯ ಗಮನದಲ್ಲಿರಲಿ ಎಂದಿದ್ದಾರೆ.‌

ADVERTISEMENT

‘ಕಾಂಗ್ರೆಸ್‌ನಲ್ಲಿಯೇ ಉಳಿಯುತ್ತೇವೆ’: ಗೋವಾ ಕಾಂಗ್ರೆಸ್‌ನ ಉಳಿದ ಮೂವರು ಶಾಸಕರು ಪಕ್ಷದಲ್ಲಿಯೇ ಉಳಿಯುತ್ತೇವೆ ಎಂದು ಘೋಷಿಸಿದ್ದಾರೆ.

ಈ ಬಾರಿಯ ವಿಧಾನಸಭಾ ಚುನಾವಣೆಗೂ ಮುನ್ನ ಎಲ್ಲಾ ಅಭ್ಯರ್ಥಿಗಳಿಂದ, ‘ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ’ ಎಂದು ಕಾಂಗ್ರೆಸ್‌ ಪ್ರತಿಜ್ಞೆ ಮಾಡಿಸಿಕೊಂಡಿತ್ತು. ಪ್ರತಿಜ್ಞೆಯ ಹೊರತಾಗಿಯೂ 11ರಲ್ಲಿ ಎಂಟು ಶಾಸಕರು ಈಗ ಪಕ್ಷ ತೊರೆದು, ಬಿಜೆಪಿ ಸೇರಿದ್ದಾರೆ.

ಈಗ ಕಾಂಗ್ರೆಸ್‌ನಲ್ಲಿಯೇ ಉಳಿದಿರುವ ಯೂರಿ ಅಲೆಮಾಯೋ, ಆಲ್ಟೋನ್ ಡಿಕೋಸ್ಟಾ ಮತ್ತು ಕಾರ್ಲೋಸ್‌ ಫೆರೆರಾ, ‘ನಾವು ಖರೀದಿಸಬಹುದಾದ ಸರಕಲ್ಲ. ನಾವು ಪಕ್ಷದಲ್ಲಿಯೇ ಉಳಿಯುತ್ತೇವೆ’ ಎಂದಿದ್ದಾರೆ.

ಮೂರನೇ ಎರಡರಷ್ಟು ಶಾಸಕರು ಪಕ್ಷಾಂತರ ಮಾಡಿರುವುದರಿಂದ ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ.

ಕ್ರಮ ಜರುಗಿಸದ ಸಿಬಿಐ: ಪಂಜಾಬ್‌ನಲ್ಲಿ ತಮ್ಮ ಪಕ್ಷದ 10 ಶಾಸಕರಿಗೆ ತಲಾ ₹25 ಕೋಟಿ ನೀಡುವ ಆಮಿಷ ಒಡ್ಡಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.

ಪಂಜಾಬ್‌ನಲ್ಲಿ ಸರ್ಕಾರ ಉರುಳಿಸಲು ಮುಂದಾಗಿರುವ ಬಿಜೆಪಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಎಎಪಿ ಮುಖಂಡರು ಆ.31ರಂದು ಸಿಬಿಐ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಆದರೆ ಸಿಬಿಐ ಇನ್ನೂ ಕ್ರಮ ತೆಗೆದುಕೊಂಡಿಲ್ಲ ಎಂದು ಎಎಪಿ ಮುಖಂಡರು ಆರೋಪಿಸಿದ್ದಾರೆ.

ಕ್ರಮ ಜರುಗಿಸದ ಸಿಬಿಐ: ಎಎಪಿ

ಗೋವಾದಲ್ಲಿ ಕಾಂಗ್ರೆಸ್ ಶಾಸಕರನ್ನು ಸೆಳೆದಿರುವ ಬಿಜೆಪಿ, ಪಂಜಾಬ್‌ನಲ್ಲೂ ತಮ್ಮ ಪಕ್ಷದ ಶಾಸಕರನ್ನು ಸೆಳೆಯಲು ಯತ್ನಿಸಿದೆ ಎಂದು ಎಎಪಿ ಬುಧವಾರ ಆರೋಪಿಸಿದೆ. ಪಕ್ಷದ 10 ಶಾಸಕರಿಗೆ ತಲಾ ₹25 ಕೋಟಿ ನೀಡುವ ಆಮಿಷ ಒಡ್ಡಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.

ಪಂಜಾಬ್‌ನಲ್ಲಿ ಸರ್ಕಾರ ಉರುಳಿಸಲು ಮುಂದಾಗಿರುವ ಬಿಜೆಪಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಎಎಪಿ ಮುಖಂಡರು ಆ.31ರಂದು ಸಿಬಿಐ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಆದರೆ ಸಿಬಿಐ ಇನ್ನೂ ಕ್ರಮ ತೆಗೆದುಕೊಂಡಿಲ್ಲ ಎಂದು ಎಎಪಿ ಮುಖಂಡರು ಆರೋಪಿಸಿದ್ದಾರೆ.

ಡಿಜಿಪಿಗೆ ಎಎಪಿ ದೂರು

ಚಂಡೀಗಡ ವರದಿ: ಶಾಸಕರನ್ನು ಖರೀದಿಸಲು ಯತ್ನಿಸುವ ಮೂಲಕ ಪಂಜಾಬ್‌ನಲ್ಲಿ ಎಎಪಿ
ನೇತೃತ್ವದ ಸರ್ಕಾರವನ್ನು ಉರುಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿರುವ
ಆಡಳಿತಾರೂಢ ಪಕ್ಷ, ಈ ಸಂಬಂಧ ತನಿಖೆ
ನಡೆಸುವಂತೆ ಡಿಜಿಪಿಗೆ ದೂರು ನೀಡಿದೆ. ಆದರೆ, ಈ ಆರೋಪವನ್ನು ಬಿಜೆಪಿ ಅಲ್ಲಗಳೆದಿದೆ.

ಪಕ್ಷದ ಮುಖಂಡ ಚೀಮಾ ನೇತೃತ್ವದ ನಿಯೋಗವು ಡಿಜಿಪಿ ಗೌರವ್ ಯಾದವ್ ಅವರನ್ನು ಭೇಟಿಯಾಗಿ, ದೂರು ಸಲ್ಲಿಸಿತು. ಡಿಜಿಪಿ ಅವರಿಗೆ ಎಲ್ಲ ಸಾಕ್ಷ್ಯಾಧಾರಗಳನ್ನು ಸಲ್ಲಿಸಲಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಜಲಂಧರ್‌ ಪಶ್ಚಿಮ ಕ್ಷೇತ್ರದ ಶಾಸಕ ಶೀತಲ್ ಅಂಗುರಾಳ್ ಅವರಿಗೆ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಎಎಪಿ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.