ADVERTISEMENT

ಗೋವಾ: ಶಾಸಕ ಸ್ಥಾನಕ್ಕೆ ಕಾಂಗ್ರೆಸ್‌ನ ರವಿ ನಾಯಿಕ ರಾಜೀನಾಮೆ

ಪಿಟಿಐ
Published 7 ಡಿಸೆಂಬರ್ 2021, 10:35 IST
Last Updated 7 ಡಿಸೆಂಬರ್ 2021, 10:35 IST

ಪಣಜಿ : ಗೋವಾ ವಿಧಾನಸಭೆ ಚುನಾವಣೆಗೆ ಸಮೀಪಿಸುತ್ತಿರುವ ಸಂದರ್ಭದಲ್ಲಿಯೇ ಕಾಂಗ್ರೆಸ್‌ಗೆ ಮತ್ತೊಂದು ಹಿನ್ನಡೆಯಾಗಿದೆ. ಮಾಜಿ ಮುಖ್ಯಮಂತ್ರಿ ರವಿ ನಾಯಿಕ ಅವರು ಶಾಸಕ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಮಾಜಿ ಮುಖ್ಯಮಂತ್ರಿ ಲುಜಿನ್ಹೊ ಫಲೈರೊ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ತೃಣಮೂಲ ಕಾಂಗ್ರೆಸ್‌ ಸೇರಿದ್ದರು. ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಎಂಸಿ ನಿರ್ಧರಿಸಿದೆ. ಈಗ ನಾಯಿಕ ಅವರ ರಾಜೀನಾಮೆಯಿಂದ 40 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಸ್ಥಾನ ಮೂರಕ್ಕೆ ಇಳಿದಿದೆ.

ನಾಯಿಕ ಅವರ ಇಬ್ಬರು ಪುತ್ರರು ಕಳೆದ ವರ್ಷ ಬಿಜೆಪಿ ಸೇರ್ಪಡೆಯಾಗಿದ್ದಾರೆ. ರವಿ ನಾಯಿಕ ಅವರು ಸಹ ಬಿಜೆಪಿ ಸೇರಲಿದ್ದಾರೆ ಎಂದು ಮೂಲಗಳು ಹೇಳಿವೆ.

ADVERTISEMENT

‘ಶಾಸಕ ಸ್ಥಾನಕ್ಕೆ ಈಗ ರಾಜೀನಾಮೆ ನೀಡಿದ್ದೇನೆ. ಮುಂದಿನ ನಿರ್ಧಾರವನ್ನು ನಂತರ ತಿಳಿಸುತ್ತೇನೆ’ ಎಂದು ಪೊಂಡಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ರವಿ ನಾಯಿಕ ಅವರು ವಿಧಾನಸಭೆ ಅಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ ನಂತರ ಸುದ್ದಿಗಾರರಿಗೆ ತಿಳಿಸಿದರು.

‘ಮುಂಬರುವ ಚುನಾವಣೆಗೆ ಅವರಿಗೆ ಪಕ್ಷದ ಟಿಕೆಟ್‌ ನೀಡಲು ಈ ಮೊದಲೇ ನಿರಾಕರಿಸಲಾಗಿದೆ. ಪೊಂಡಾ ಕ್ಷೇತ್ರದಲ್ಲಿ ಪಕ್ಷದ ಕಾರ್ಯಚಟುವಟಿಕೆಗಳಿಂದಲೂ ಅವರನ್ನು ದೂರವಿಡಲಾಗಿದೆ. ನಾಯಿಕ ಅವರ ನಿರ್ಗಮನದಿಂದ ಪಕ್ಷಕ್ಕೆ ಯಾವುದೇ ಹಾನಿ ಇಲ್ಲ. ಈಗಾಗಲೇ ಅವರ ಒಂದು ಕಾಲು ಬಿಜೆಪಿಯಲ್ಲಿದೆ’ ಎಂದು ಕಾಂಗ್ರೆಸ್‌ನ ರಾಜ್ಯ ಘಟಕದ ಮುಖ್ಯಸ್ಥ ಗಿರೀಶ್‌ ಚೋಡನಕರ್‌ ಹೇಳಿದರು.

ವಿಧಾನಸಭೆಗೆ 2017ರಲ್ಲಿ ಚುನಾವಣೆ ನಡೆದಾಗ ಕಾಂಗ್ರೆಸ್‌ 17 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಚುನಾವಣೆ ನಂತರ ವಿಶ್ವಜಿತ್‌ ರಾಣೆ ಸೇರಿದಂತೆ ಮೂವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದರು. 2019ರ ಜುಲೈನಲ್ಲಿ ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಯಾಯಿತು. ಅಂದಿನ ವಿರೋಧ ಪಕ್ಷದ ನಾಯಕ ಚಂದ್ರಕಾಂತ್‌ ಕವಳೇಕರ್‌ ನೇತೃತ್ವದಲ್ಲಿ 10 ಮಂದಿ ಶಾಸಕರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು. ಕವಳೇಕರ್‌ ಅವರು ಸದ್ಯ ಗೋವಾದ ಉಪ ಮುಖ್ಯಮಂತ್ರಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.