ADVERTISEMENT

ಮೋದಿ, ಗೋಡ್ಸೆ ಇಬ್ಬರೂ ಒಂದೇ ಸಿದ್ಧಾಂತದಲ್ಲಿ ನಂಬಿಕೆ ಇಟ್ಟವರು: ರಾಹುಲ್ ಗಾಂಧಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 9:52 IST
Last Updated 30 ಜನವರಿ 2020, 9:52 IST
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ   

ಕೇರಳ: ಪ್ರಧಾನಿನರೇಂದ್ರ ಮೋದಿ ಹಾಗೂ ಮಹಾತ್ಮಗಾಂಧಿಗೆ ಗುಂಡಿಕ್ಕಿದ ನಾಥೂರಾಮ್ ಗೋಡ್ಸೆ ಒಂದೇ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟವರು ಎಂದು ಮೋದಿ ವಿರುದ್ಧ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಕೇರಳದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಪ್ರಧಾನಿ ನರೇಂದ್ರ ಮೋದಿ ಅವರು ನಿಜವಾದ ಭಾರತೀಯರನ್ನು ಮತ್ತೆ ನೀವು ಭಾರತೀಯರು ಎಂಬುದನ್ನು ಸಾಬೀತುಪಡಿಸಿ ಎಂದು ಹೇಳುವ ಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದರು.

ಕೇರಳದ ವಯನಾಡಿನ ಕಲ್ಪೆಟ್ಟದಲ್ಲಿ 'ಸಂವಿಧಾನ ಉಳಿಸಿ' ಜಾಥಾದಲ್ಲಿ ಪಾಲ್ಗೊಂಡಿದ್ದರು, ನಂತರಮೆರವಣಿಗೆಯಲ್ಲಿದ್ದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಗೋಡ್ಸೆ ಮತ್ತು ಪ್ರಧಾನಿ ಮೋದಿ ನಡುವೆ ಯಾವುದೇ ವ್ಯತ್ಯಾಸಗಳಿಲ್ಲ. ಗೋಡ್ಸೆ ಸಿದ್ಧಾಂತವನ್ನೇ ಮೋದಿ ಅನುಸರಿಸಿದರೂ ನೇರವಾಗಿ ಅದನ್ನು ಜನತೆಯ ಮುಂದೆ ಹೇಳುವ ತಾಕತ್ತು ಮೋದಿಗೆ ಇಲ್ಲ ಎಂದು ಕುಟುಕಿದರು.

ADVERTISEMENT

ಏನೂ ತಿಳಿಯದ ವ್ಯಕ್ತಿಯೊಬ್ಬ ಮಹಾತ್ಮ ಗಾಂಧಿ ಅವರ ಸಿದ್ಧಾಂತಗಳಿಗೆ ಸವಾಲು ಹಾಕುತ್ತಿದ್ದಾನೆ. ಆ ಮೂಲಕ ದ್ವೇಷದ ವಾತಾವರಣ ನಿರ್ಮಾಣ ಮಾಡುತ್ತಿದ್ದಾನೆ. ನೀವು ಭಾರತೀಯರೆಂದು ಸಾಬೀತುಪಡಿಸಿ ಎಂದು ಹೇಳಲು ಮೋದಿ ಯಾರು ಎಂದು ಪ್ರಶ್ನಿಸಿದರು.
ಇಂದು ಭಾರತೀಯರನ್ನು ಮತ್ತೆ ನಾವು ಭಾರತೀಯರು ಎಂದು ಸಾಬೀತುಪಡಿಸುವಂತೆ ಮಾಡಲಾಗುತ್ತಿದೆ. ನರೇಂದ್ರ ಮೋದಿಗೆ ಈ ರೀತಿ ಮಾಡಲು ಲೈಸೆನ್ಸ್ ನೀಡಿದವರು ಯಾರು. ನಾನು ಭಾರತೀಯ, ನನ್ನ ಭಾರತೀಯತ್ವವನ್ನು ಪ್ರಶ್ನಿಸಲು ಮೋದಿ ಯಾರು. ನಾನು ಯಾರ ಮುಂದೆಯೂ ನನ್ನ ಭಾರತೀಯತ್ವವನ್ನು ಸಾಬೀತುಪಡಿಸುವ ಅಗತ್ಯವಿಲ್ಲ. ನನ್ನಂತೆಯೇ ನೂರು ಕೋಟಿಗೂ ಅಧಿಕ ಇರುವ ಭಾರತೀಯ ಪ್ರಜೆಗಳೂ ಕೂಡ ಭಾರತೀಯರೇಎಂದು ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.