ADVERTISEMENT

ಮಹದಾಯಿ: ಗೋವಾ ಸರ್ಕಾರದ ದ್ವಂದ್ವ

ಮಹದಾಯಿ ಹುಲಿ ಸಂರಕ್ಷಿತ ಪ್ರದೇಶ ಘೋಷಣೆಗೆ ಹಿಂದೇಟು

​ಪ್ರಜಾವಾಣಿ ವಾರ್ತೆ
Published 5 ಜನವರಿ 2023, 21:46 IST
Last Updated 5 ಜನವರಿ 2023, 21:46 IST
ಖಾನಾಪುರ ತಾಲ್ಲೂಕಿನ ಕಣಕುಂಬಿ ಅರಣ್ಯದಲ್ಲಿ ಅರ್ಧಕ್ಕೆ ನಿಂತ ಕಳಸಾ ನಾಲೆಯ ಕಾಲುವೆ (ಸದ್ಯ ಇದನ್ನು ಮುಚ್ಚಲಾಗಿದೆ)
ಖಾನಾಪುರ ತಾಲ್ಲೂಕಿನ ಕಣಕುಂಬಿ ಅರಣ್ಯದಲ್ಲಿ ಅರ್ಧಕ್ಕೆ ನಿಂತ ಕಳಸಾ ನಾಲೆಯ ಕಾಲುವೆ (ಸದ್ಯ ಇದನ್ನು ಮುಚ್ಚಲಾಗಿದೆ)   

ನವದೆಹಲಿ: ವನ್ಯಜೀವಿ ಧಾಮದಿಂದ ಕಳಸಾ ಬಂಡೂರಿ ಯೋಜನೆಗೆ ಮಹದಾಯಿ ನೀರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ಸರ್ಕಾರಕ್ಕೆ ವನ್ಯಜೀವಿ ಕಾಯ್ದೆಯಡಿ ನೋಟಿಸ್‌ ನೀಡಲು ಗೋವಾ ಸರ್ಕಾರ ತೀರ್ಮಾನಿಸಿದೆ. ಆದರೆ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು (ಎನ್‌ಟಿಸಿಎ) ಹಲವು ಸಲ ನಿರ್ದೇಶನ ನೀಡಿದ ಬಳಿಕವೂ ‘ಮಹದಾಯಿ ವನ್ಯಜೀವಿ ಧಾಮ’ವನ್ನು ಹುಲಿ ಸಂರಕ್ಷಣಾ ಪ್ರದೇಶವನ್ನಾಗಿ ಘೋಷಿಸಲು ಗೋವಾ ಸರ್ಕಾರ ಮೀನಮೇಷ ಎಣಿಸುತ್ತಿದೆ.

ಕಳಸಾ–ಬಂಡೂರಿ ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ ಡಿಸೆಂಬರ್‌ 29ರಂದು ಅನುಮೋದನೆ ನೀಡಿದೆ. ಅದರ ಬೆನ್ನಲ್ಲೇ ವಿಶೇಷ ಸಚಿವ ಸಂಪುಟ ಸಭೆ ನಡೆಸಿದ ಗೋವಾ ಸರ್ಕಾರ, ವನ್ಯಜೀವಿ ಕಾಯ್ದೆಯಡಿ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ನೀಡಲು ನಿರ್ಧರಿಸಿತು. ‘ವನ್ಯಜೀವಿ ಧಾಮದಿಂದ ನೀರನ್ನು ತೆಗೆದುಕೊಂಡು ಹೋಗಲು ಕರ್ನಾಟಕ ಸರ್ಕಾರಕ್ಕೆ ಅಧಿಕಾರ ಇಲ್ಲ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ಮಹದಾಯಿ ನ್ಯಾಯಾಧೀಕರಣ ಕರ್ನಾಟಕಕ್ಕೆ 3.9 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದೆ. ಇದನ್ನು ನಾವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದೇವೆ’ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಸೋಮವಾರ ಹೇಳಿಕೆ ನೀಡಿದ್ದಾರೆ.

ಮಹದಾಯಿ ವನ್ಯಜೀವಿ ಧಾಮದಲ್ಲಿ 2019ರ ಡಿಸೆಂಬರ್‌ ತಿಂಗಳಲ್ಲಿ ಹುಲಿ ಹಾಗೂ ಮೂರು ಮರಿಗಳು
ಮೃತಪಟ್ಟಿದ್ದವು. ಹುಲಿ ಸಂರಕ್ಷಣಾ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು. ಮಹದಾಯಿ ವನ್ಯಜೀವಿ ಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಎನ್‌ಟಿಸಿಎ 2020ರ ಜನವರಿಯಲ್ಲಿ ಗೋವಾ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆದರೆ, ಗೋವಾ ಸರ್ಕಾರ ಕ್ರಮ ಕೈಗೊಂಡಿರಲಿಲ್ಲ. 2022ರ ಸೆಪ್ಟೆಂಬರ್‌ನಲ್ಲಿ ಮತ್ತೊಮ್ಮೆ ಪತ್ರ ಬರೆದಿದ್ದ ಪ್ರಾಧಿಕಾರ, ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ತಾಕೀತು ಮಾಡಿತ್ತು. ಆ ಬಳಿಕವೂ ಸರ್ಕಾರ ಕ್ರಮ ಕೈಗೊಂಡಿರಲಿಲ್ಲ.

ADVERTISEMENT

‘ಮಹದಾಯಿ ಯೋಜನೆಗೆ ವನ್ಯಜೀವಿ ಧಾಮದಿಂದ ನೀರು ಬಳಸಿಕೊಳ್ಳುತ್ತಿಲ್ಲ. ಜತೆಗೆ, ವನ್ಯಜೀವಿ ಧಾಮದಲ್ಲೂ ಯೋಜನೆ ಅನುಷ್ಠಾನ ಮಾಡುತ್ತಿಲ್ಲ. ಕರ್ನಾಟಕದ ವ್ಯಾಪ್ತಿಯಲ್ಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ನ್ಯಾಯಾಧೀಕರಣ ಹಂಚಿಕೆ ಮಾಡಿರುವ ನೀರನ್ನು ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಗೋವಾ ಸರ್ಕಾರ ಅನಗತ್ಯವಾಗಿ ತಕರಾರು ಎತ್ತುತ್ತಿದೆ’ ಎಂದು ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಸಿಎಂ ರಾಜಿನಾಮೆಗೆ ಒತ್ತಾಯ

ಕಳಸಾ–ಬಂಡೂರಿ ಯೋಜನೆಯ ಸಮಗ್ರ ಯೋಜನಾ ವರದಿಗೆ (ಡಿಪಿಆರ್‌) ಕೇಂದ್ರ ಜಲ ಆಯೋಗ ನೀಡಿರುವ ಅನುಮೋದನೆ ರದ್ದತಿಗೆ ಹೋರಾಟ ಮಾಡದಿದ್ದರೆ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ರಾಜೀನಾಮೆ ನೀಡಬೇಕು ಎಂದು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಗುರುವಾರ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟಿಎಂಸಿ ರಾಜ್ಯ ಸಂಚಾಲಕ ಸಾಮಿಲ್‌ ವೋಲ್ವೋಕರ್, ಮಹದಾಯಿಯನ್ನು ಉಳಿಸಿಕೊಳ್ಳಲು ಆಂದೋಲನ ಒಂದೇ ದಾರಿಯಾಗಿದೆ. ಆದ್ದರಿಂದ ಬುಧವಾರದಿಂದ ಪ್ರತಿಭಟನೆ ಆರಂಭಿಸಿದ್ದೇವೆ. ಈ ಕುರಿತು ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೈ ಅವರೊಂದಿಗೆ ಚರ್ಚಿಸಲಾಗಿದೆ. ಸಿಎಂಗೆ ಮಹದಾಯಿಯನ್ನು ಉಳಿಸಲು ಸಾಧ್ಯವಾಗದಿದ್ದರೆ ಅವರು ತಮ್ಮ ಸ್ಥಾನ ತ್ಯಜಿಸಬೇಕು ಎಂದು ವೋಲ್ವೊಕರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.