ನವದೆಹಲಿ: ಕೇಂದ್ರ ಸರ್ಕಾರ ಜಾಹೀರಾತಿಗಾಗಿ ಮಾಡುವ ವೆಚ್ಚವು 2020–21ರಿಂದ 2024–25ರ ಅವಧಿಯಲ್ಲಿ ಬರೋಬ್ಬರಿ ಶೇ 84ರಷ್ಟು ಏರಿಕೆಯಾಗಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೋಮವಾರ ಹೇಳಿದೆ.
ಈ ಮಾಹಿತಿಯನ್ನು ಸಂಸತ್ತಿನ ಎದರು ಬಹಿರಂಗಪಡಿಸುವ ಬದಲು, ಜಾಹೀರಾತು ಮತ್ತು ದೃಶ್ಯ ಪ್ರಸಾರ ನಿರ್ದೇಶನಾಲಯದ (DAVP) ವೆಬ್‌ಸೈಟ್‌ನಲ್ಲಿ ಅಂಕಿಅಂಶಗಳು ಲಭ್ಯವಿದೆ ಎಂದು ತಿಳಿಸಿದ್ದಕ್ಕಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಪತ್ರಿಕೆಗಳು ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಜಾಹೀರಾತು ಮತ್ತು ಪ್ರಚಾರಕ್ಕಾಗಿ ಸರ್ಕಾರವು ಕಳೆದ ಐದು ವರ್ಷಗಳಲ್ಲಿ ಮಾಡಿರುವ ವೆಚ್ಚದ ಲೆಕ್ಕ ನೀಡುವಂತೆ ಟಿಎಂಸಿ ಸಂಸದ ಡೆರೆಕ್ ಓ'ಬ್ರಯಾನ್ ಅವರು ರಾಜ್ಯಸಭೆಯಲ್ಲಿ ಆಗಸ್ಟ್ 8ರಂದು ಪ್ರಶ್ನೆ ಕೇಳಿದ್ದರು.
ಇದಕ್ಕೆ ಲಿಖಿತ ಉತ್ತರ ನೀಡಿದ್ದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಎಲ್. ಮುರುಗನ್, ಕೇಂದ್ರೀಯ ಸಂವಹನ ಮಂಡಳಿಯು (CWC) ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಪರವಾಗಿ ಜಾಹೀರಾತುಗಳನ್ನು ನೀಡುತ್ತದೆ. ವೆಚ್ಚದ ವಿವರವು CWC ವೆಬ್‌ಸೈಟ್ – www.davp.nic.in.ನಲ್ಲಿ ಲಭ್ಯವಿದೆ ಎಂದು ತಿಳಿಸಿದ್ದರು.
ಸೂಕ್ತ ಪ್ರತಿಕ್ರಿಯೆ ನೀಡದ್ದಕ್ಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಡರೆಕ್, CWC ವೆಬ್‌ಸೈಟ್‌ನಿಂದಲೇ ಮಾಹಿತಿ ಕಲೆಹಾಕಿರುವುದಾಗಿ ಹೇಳಿದ್ದಾರೆ.
ಪಿಟಿಐಗೆ ಪ್ರತಿಕ್ರಿಯಿಸಿರುವ ಅವರು, 'ದುರ್ಬಲ ಮೋದಿ ಒಕ್ಕೂಟವು ಸಂಸತ್ತನ್ನು ಅಣಕಿಸಲು ಹೊಸ ಮಾರ್ಗ ಕಂಡುಕೊಂಡಿದೆ. ಪ್ರಶ್ನೋತ್ತರ ಅವಧಿಯಲ್ಲಿ ನೇರವಾಗಿ ಉತ್ತರಗಳನ್ನು ನೀಡದೆ, ಸಚಿವಾಲಯಗಳ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವಂತೆ ಸಂಸದರಿಗೆ ಹೇಳುತ್ತಿದೆ. ನಾವು ಅಲ್ಲಿಗೆ ಹೋಗಿ ಮಾಹಿತಿ ನೋಡಿಕೊಳ್ಳುತ್ತೇವೆ' ಎಂದಿದ್ದಾರೆ.
DAVP ವೆಬ್‌ಸೈಟ್‌ನಲ್ಲಿನ ದತ್ತಾಂಶ ವಿಶ್ಲೇಷಣೆ ಪ್ರಕಾರ, ಸರ್ಕಾರವು 2020-21ರಲ್ಲಿ ಜಾಹೀರಾತುಗಳಿಗಾಗಿ ₹ 349.24 ಕೋಟಿ ವೆಚ್ಚ ಮಾಡಿತ್ತು. ಅದು 2021-22ರ ಹೊತ್ತಿಗೆ ₹ 274.87 ಕೋಟಿಗೆ ಇಳಿದಿತ್ತು. ಆದರೆ, 2022-23ರಲ್ಲಿ ₹ 347.38 ಕೋಟಿ, 2023-24ರಲ್ಲಿ ₹ 656.08 ಕೋಟಿಗೆ ವ್ಯಯಿಸಲಾಗಿತ್ತು. 2024-25ರಲ್ಲಿ ₹ 643.63 ಕೋಟಿಗೆ ಖರ್ಚು ಮಾಡಲಾಗಿದೆ.
66 ಸಚಿವಾಲಯಗಳಿಗೆ ಪ್ರತಿವರ್ಷ ಸರಾಸರಿ ₹ 454 ಕೋಟಿ ವ್ಯವಯಿಸಲಾಗಿದೆ.
'2020–21ರಿಂದ 2025ರ ಆಗಸ್ಟ್‌ವರೆಗೆ ಒಟ್ಟು ₹ 2,320.14 ಕೋಟಿ ಖರ್ಚು ಮಾಡಲಾಗಿದೆ' ಎಂದಿರುವ ಡರೆಕ್, 'ಪ್ರಧಾನಿ ಹೇಗೆ ಪಿಆರ್‌ಒ ಆಗಿ ಬದಲಾಗಿದ್ದಾರೆ ಎಂಬುದನ್ನು ತೋರಿಸಿರುವ ಆಘಾತಕಾರಿ ಅಂಕಿ– ಅಂಶಗಳಿವು' ಎಂದಿದ್ದಾರೆ.
ಹಾಗೆಯೇ, 'ಸರ್ಕಾರವು ಯಾವುದೇ ಉತ್ತರಗಳನ್ನು ಸಂಸತ್ತಿನಲ್ಲಿ ನೀಡುವುದಿಲ್ಲ. ಅತ್ಯಂತ ಕೀಳುಮಟ್ಟಕ್ಕೆ ಇಳಿದಿರುವ ವ್ಯವಸ್ಥೆಗೆ ಇದು ಹೊಸ ಸೇರ್ಪಡೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.