ADVERTISEMENT

ಎಂಎಸ್‌ಎಂಇ ಉತ್ಪನ್ನಗಳ ಮಾರಾಟಕ್ಕೆ ಇ–ಪೋರ್ಟಲ್‌

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 14:01 IST
Last Updated 20 ಜನವರಿ 2021, 14:01 IST
ನಿತಿನ್‌ ಗಡ್ಕರಿ
ನಿತಿನ್‌ ಗಡ್ಕರಿ   

ಮುಂಬೈ: ‘ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯವು (ಎಂಎಸ್‌ಎಂಇ) ತನ್ನ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲವಾಗುವಂತೆ, ಅಮೆಜಾನ್‌ ರೀತಿಯಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್‌ ಜೊತೆಗೂಡಿ ಇ–ಪೋರ್ಟಲ್‌ ಆರಂಭಕ್ಕೆ ಸರ್ಕಾರ ಯೋಜನೆ ರೂಪಿಸಿದೆ’ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದರು.

ಮುಂಬೈ ಮೂಲದ ಅಖಿಲ ಭಾರತ ಕೈಗಾರಿಕೆಗಳ ಒಕ್ಕೂಟ(ಎಐಎಐ) ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮುಂದಿನ ಎರಡು ವರ್ಷಗಳಲ್ಲಿ ಪ್ರಸ್ತುತ ₹80 ಸಾವಿರ ಕೋಟಿ ಇರುವ ಹಳ್ಳಿ ಕೈಗಾರಿಕೆಗಳನ್ನು ₹5 ಲಕ್ಷ ಕೋಟಿಗೆ ಏರಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿದೆ. ಗ್ರಾಮೀಣ ಪ್ರದೇಶದಲ್ಲಿ, ಕೃಷಿ ಕ್ಷೇತ್ರ ಹಾಗೂ ಬುಡಕಟ್ಟು ಪ್ರದೇಶಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಿ ಬಡತನವನ್ನು ನಿರ್ಮೂಲನೆ ಮಾಡುವುದು ಸರ್ಕಾರದ ಗುರಿ’ ಎಂದರು.

‘ಎಂಎಸ್‌ಎಂಇ ವರ್ತಕರ ಹಿತಾಸಕ್ತಿಯನ್ನು ಗಮನದಲ್ಲಿ ಇರಿಸಿಕೊಂಡು, ವಸ್ತುಗಳ ಮಾರಾಟದ 45 ದಿನದೊಳಗಾಗಿ ಬಾಕಿ ಹಣವನ್ನು ಚುಕ್ತಾ ಮಾಡಬೇಕು ಎಂದು ಸರ್ಕಾರಿ ಸ್ವಾಮ್ಯದ ಉದ್ಯಮಗಳಿಗೆ ಸೂಚಿಸಲಾಗಿದೆ. ಎಂಎಸ್‌ಎಂಇ ಬಾಕಿಯನ್ನು ಸೂಕ್ತವಾಗಿ ಚುಕ್ತಾ ಮಾಡುವುದಕ್ಕೆ ಕಾನೂನು ತರುವ ಉದ್ದೇಶವಿದೆ’ ಎಂದರು.

ADVERTISEMENT

‘ಟ್ರ್ಯಾಕ್ಟರ್‌ ಹಾಗೂ ಕೃಷಿ ಉಪಕರಣಗಳಿಗೆ ನವೀಕರಿಸಲಾಗದ ಇಂಧನದ ಬದಲು ಜೈವಿಕ–ಇಂಧನ ಬಳಸಿದರೆ, ರೈತರು ವಾರ್ಷಿಕವಾಗಿ ₹1 ಲಕ್ಷ ಉಳಿಸಬಹುದು. ಜೈವಿಕ ಇಂಧನ ಉತ್ಪಾದನೆಗೂ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡುತ್ತಿದ್ದು, ಈ ಮೂಲಕ ₹ 8 ಲಕ್ಷ ಕೋಟಿ ಮೌಲ್ಯದ ಕಚ್ಛಾತೈಲ ಆಮದನ್ನು ಭಾರತ ಕಡಿಮೆಗೊಳಿಸಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.