ADVERTISEMENT

ಖಾಸಗಿ ಶಾಲಾ ಶಿಕ್ಷಕರು, ಅತಿಥಿ ಉಪನ್ಯಾಸಕರ ನೆರವಿಗೆ ಸರ್ಕಾರ ಧಾವಿಸಲಿ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 5:42 IST
Last Updated 8 ಆಗಸ್ಟ್ 2020, 5:42 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ಬೆಂಗಳೂರು: ಕೊರೊನಾ ಸಂಕಷ್ಟ ಕಾಲದಲ್ಲಿ ವೇತನವಿಲ್ಲದೆ ಕಂಗೆಟ್ಟಿರುವ ರಾಜ್ಯದ ಸುಮಾರು ಎರಡೂವರೆ ಲಕ್ಷ ಖಾಸಗಿ ಶಾಲಾ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರ ನೆರವಿಗೆ ಸರ್ಕಾರ ತಕ್ಷಣವೇ ಮುಂದಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯದಾದ್ಯಂತ 20 ಸಾವಿರಕ್ಕೂ ಹೆಚ್ಚು ಖಾಸಗಿ ಶಾಲೆಗಳ ಶಿಕ್ಷಕರಿಗೆ ಕಳೆದ ಏಪ್ರಿಲ್‌ನಿಂದ ವೇತನ ಸಿಗದೇ ದೈನಂದಿನ ಜೀವನ ಸಾಗಿಸಲು ಪರದಾಡುತ್ತಿದ್ದಾರೆ. ಅತಿಥಿ ಉಪನ್ಯಾಸಕರ ನೋವು ಇದಕ್ಕಿಂತ ಭಿನ್ನವಾಗಿಲ್ಲ. ಸರ್ಕಾರ ಈ ಬಗ್ಗೆ ಖಾಸಗಿ ಶಾಲಾ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಅತಂತ್ರಕ್ಕೆ ಸಿಲುಕಿರುವ ಶಿಕ್ಷಕರ ನೆರವಿಗೆ ತಕ್ಷಣ ಧಾವಿಸಬೇಕು ಎಂದಿದ್ದಾರೆ.

ಸಮುದಾಯವು ಮನೆ ಬಾಡಿಗೆ ಕಟ್ಟಲೂ ಆಗದೆ ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. ಇಂತಹ ಶಿಕ್ಷಕರಿಗೆ ಸರ್ಕಾರ ವಿಶೇಷ ಆರ್ಥಿಕ ನೆರವು ಮತ್ತು ಸಾಲ ಸೌಲಭ್ಯ ಒದಗಿಸಬೇಕು. ವಿದ್ಯಾರ್ಥಿಗಳು ಶುಲ್ಕ ಕಟ್ಟುತ್ತಿಲ್ಲ ಎಂಬ ಕಾರಣ ಹೇಳಿ ಶಿಕ್ಷಕರನ್ನು ಕೆಲಸದಿಂದ ತೆಗೆಯಲು ಆಡಳಿತ ಮಂಡಳಿಗಳು ಮುಂದಾಗುತ್ತಿರುವುದನ್ನು ತಪ್ಪಿಸಲು ಸರ್ಕಾರ ತಡಮಾಡದೆ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.