ADVERTISEMENT

ಭೋಪಾಲ್‌ ಅನಿಲ ದುರಂತಕ್ಕೆ 37 ವರ್ಷ: ‘ನ್ಯಾಯ ಕೊಡಿಸುವಲ್ಲಿ ಸರ್ಕಾರಗಳು ವಿಫಲ’

ಪಿಟಿಐ
Published 1 ಡಿಸೆಂಬರ್ 2021, 13:46 IST
Last Updated 1 ಡಿಸೆಂಬರ್ 2021, 13:46 IST
ಭೋಪಾಲ್‌ ಅನಿಲ ದುರಂತ
ಭೋಪಾಲ್‌ ಅನಿಲ ದುರಂತ   

ಭೋಪಾಲ್: ಭೋಪಾಲ್‌ ಅನಿಲ ದುರಂತ ಸಂಭವಿಸಿ 37 ವರ್ಷಗಳು ಗತಿಸಿವೆ. ಆದರೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರ ನಡೆಸಿರುವ ಎಲ್ಲ ಸರ್ಕಾರಗಳು ವಿಫಲವಾಗಿವೆ ಎಂದು ಈ ದುರಂತದಲ್ಲಿ ಬದುಕುಳಿದವರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸಂಘಟನೆಗಳು ಬುಧವಾರ ಆರೋಪಿಸಿವೆ.

1984ರ ಡಿಸೆಂಬರ್ 2ರ ತಡರಾತ್ರಿ ಭೋಪಾಲ್‌ ಹೊರವಲಯದಲ್ಲಿರುವ ಯೂನಿಯನ್‌ ಕಾರ್ಬೈಡ್‌ ಇಂಡಿಯಾ ಲಿಮಿಟೆಡ್‌ (ಯುಸಿಐಎಲ್‌) ಕಂಪನಿಯ ಕೀಟನಾಶಕ ಘಟಕದಲ್ಲಿ ಮೀಥೈಲ್‌ ಐಸೋಸೈನೇಟ್ ಎಂಬ ವಿಷಾನಿಲ ಸೋರಿಕೆಯಾಗಿತ್ತು. ಈ ದುರ್ಘಟನೆಯಲ್ಲಿ 15,000ಕ್ಕೂ ಅಧಿಕ ಜನರು ಮೃತಪಟ್ಟಿದ್ದರೆ, ಐದು ಲಕ್ಷಕ್ಕೂ ಅಧಿಕ ಜನರು ತೊಂದರೆ ಅನುಭವಿಸಿದ್ದರು. ಈ ದುರ್ಘಟನೆ ನಂತರ ಜನಿಸಿದವರ ಪೈಕಿ ಅನೇಕರು ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ.

‘ಇದು ವಿಶ್ವದಲ್ಲಿಯೇ ಕೈಗಾರಿಕೆ ಘಟಕವೊಂದರಲ್ಲಿ ನಡೆದ ಅತ್ಯಂತ ಘೋರ ದುರಂತ. ಈ ದುರ್ಘಟನೆ ಸಂಭವಿಸಿ 37 ವರ್ಷಗಳು ಕಳೆದಿದ್ದರೂ, ಬದುಕುಳಿದವರಿಗೆ ನ್ಯಾಯ ಇನ್ನೂ ಮರೀಚಿಕೆಯಾಗಿದೆ ಎಂಬುದನ್ನು ಜಗತ್ತು ಅರಿಯಬೇಕು’ ಎಂದು ಭೋಪಾಲ್ ಗ್ಯಾಸ್ ಪೀಡಿತ್ ಮಹಿಳಾ ಸ್ಟೇಷನರಿ ಕರ್ಮಚಾರಿ ಸಂಘದ ಮುಖ್ಯಸ್ಥೆ ರಶೀದಾಬಿ ಹೇಳಿದರು.

ADVERTISEMENT

ಪರಿಸರ ಸಂರಕ್ಷಣೆಗಾಗಿ ನಡೆಸುತ್ತಿರುವ ಹೋರಾಟಕ್ಕಾಗಿ ರಶೀದಾಬಿ ಅವರಿಗೆ ‘ಗೋಲ್ಡ್‌ಮನ್ ಎನ್ವಿರಾನ್‌ಮೆಂಟಲ್ ಅವಾರ್ಡ್‌’ ಲಭಿಸಿದೆ.

‘ಯಾವ ಸಂತ್ರಸ್ತಗೂ ಈವರೆಗೆ ಸಮರ್ಪಕ ಪರಿಹಾರ ಸಿಕ್ಕಿಲ್ಲ. ಒಬ್ಬ ಅಪರಾಧಿಯನ್ನು ಸಹ ಒಂದು ನಿಮಿಷದ ಅವಧಿಗಾಗಿ ಜೈಲಿಗೆ ಕಳುಹಿಸಲಾಗಿಲ್ಲ’ ಎಂದು ಅವರು ಟೀಕಿಸಿದರು.

‘ಪ್ರಜಾತಾಂತ್ರಿಕ ವ್ಯವಸ್ಥೆ ಮೂಲಕ ಚುನಾಯಿತಗೊಂಡಿರುವ ನಮ್ಮ ಸರ್ಕಾರಗಳು ಅಮೆರಿಕದ ಕಾರ್ಪೊರೇಟ್‌ ಕಂಪನಿಗಳೊಂದಿಗೆ ಕೈಜೋಡಿಸುವುದನ್ನು ಮುಂದುವರಿಸಿವೆ’ ಎಂದೂ ಅವರು ಆರೋ‍ಪಿಸಿದರು.

‘ವಿಷಾನಿಲ ಸೋರಿಕೆಯಿಂದ ಮಣ್ಣು ಹಾಗೂ ಅಂತರ್ಜಲ ಕಲುಷಿತಗೊಂಡಿತ್ತು. ಪರಿಸರಕ್ಕಾಗಿರುವ ಈ ಹಾನಿಗೆ ಪರಿಹಾರ ನೀಡುವಂತೆ ಯುಸಿಐಎಲ್‌ನ ಮಾತೃಸಂಸ್ಥೆಯಾದ ಡೊವ್ ಕೆಮಿಕಲ್‌ಗೆ ಸರ್ಕಾರ ಸೂಚಿಸಬೇಕಿತ್ತು. ಅದರ ಬದಲಾಗಿ ಈ ದುರಂತ ಸಂಭವಿಸಿದ ಸ್ಥಳದಲ್ಲಿ ಮಧ್ಯಪ್ರದೇಶ ಸರ್ಕಾರ ಸ್ಮಾರಕ ನಿರ್ಮಿಸಲು ಮುಂದಾಗಿದೆ’ ಎಂದು ಭೋಪಾಲ್ ಗ್ರೂಪ್‌ ಫಾರ್ ಇನ್ಫಾರ್ಮೇಷನ್ ಆ್ಯಂಡ್ ಆ್ಯಕ್ಷನ್ ಎಂಬ ಸಂಘಟನೆಯ ರಚನಾ ಧಿಂಗ್ರಾ ಆರೋಪಿಸಿದರು.

ಕೋಟ್...

ಈ ದುರಂತದಲ್ಲಿ ಬದುಕುಳಿದವರಿಗೆ ಈಗಲೂ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಸಂತ್ರಸ್ತರ ಅಸಹಾಯಕತೆ ಕೊನೆಗೊಂಡಿಲ್ಲ

ಶೆಹಜಾದಿಬೀ, ಭೋಪಾಲ್‌ ಗ್ಯಾಸ್ ಪೀಡಿತ ಮಹಿಳಾ ಪುರುಷ್ ಸಂಘರ್ಷ್ ಮೋರ್ಚಾ ನಾಯಕಿ

ಡಿ.3ರಂದು ಶ್ರದ್ಧಾಂಜಲಿ ಸಭೆ

ಭೋಪಾಲ್ ಅನಿಲ ದುರಂತದಲ್ಲಿ ಮಡಿದವರ ಸ್ಮರಣಾರ್ಥ ಶುಕ್ರವಾರ (ಡಿ.3) ಭೋಪಾಲ್‌ನಲ್ಲಿರುವ ಬರ್ಕತ್‌–ಉಲ್ಲಾ ಭವನದಲ್ಲಿ ಬೆಳಿಗ್ಗೆ 11.30ಕ್ಕೆ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿದೆ ಎಂದು ಮಧ್ಯಪ್ರದೇಶ ಸರ್ಕಾರ ತಿಳಿಸಿದೆ.

ರಾಜ್ಯಪಾಲರಾದ ಮಂಗುಭಾಯಿ ಪಟೇಲ್, ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್, ವಿವಿಧ ಧರ್ಮಗಳ ಗುರುಗಳು ಸಭೆಯಲ್ಲಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.