ADVERTISEMENT

ರಾಜ್ಯಪಾಲರಿಂದ ಕೋಮು ಪ್ರಚೋದನೆ: ರಾಷ್ಟ್ರಪತಿಗೆ ತಮಿಳುನಾಡು ಸಿಎಂ ಸ್ಟಾಲಿನ್ ಪತ್ರ

ಪಿಟಿಐ
Published 9 ಜುಲೈ 2023, 13:23 IST
Last Updated 9 ಜುಲೈ 2023, 13:23 IST
ಎಂ.ಕೆ. ಸ್ಟಾಲಿನ್‌
ಎಂ.ಕೆ. ಸ್ಟಾಲಿನ್‌   

ಚೆನ್ನೈ: ರಾಜ್ಯಪಾಲ ಆರ್‌. ಎನ್‌ ರವಿ ಅವರು ಕೋಮು ದ್ವೇಷ ಪ್ರಚೋದನೆಯಲ್ಲಿ ತೊಡಗಿದ್ದು, ತಮಿಳುನಾಡಿಗೆ ಬೆದರಿಕೆಯಾಗಿ ಪರಿಣಮಿಸಿದ್ದಾರೆ ಎಂದು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಿಳಿಸಿರುವುದಾಗಿ ಸರ್ಕಾರ ಭಾನುವಾರ ಹೇಳಿದೆ.   

ಮುರ್ಮು ಅವರಿಗೆ ಶನಿವಾರ (ಜುಲೈ 8) ಪತ್ರ ಬರೆದಿರುವ ಸ್ಟಾಲಿನ್, ‘ಸಂವಿಧಾನದ 159ನೇ ವಿಧಿಯ ಅಡಿಯಲ್ಲಿ ಮಾಡಿದ ಪ್ರಮಾಣವನ್ನೇ ರವಿ ಉಲ್ಲಂಘಿಸುತ್ತಿದ್ದಾರೆ. ಅವರು ಕೋಮು ದ್ವೇಷವನ್ನು ಹುಟ್ಟುಹಾಕುತ್ತಿದ್ದಾರೆ. ತಮಿಳುನಾಡಿನ ಶಾಂತಿಗೆ ಬೆದರಿಕೆಯೊಡ್ಡಿದ್ದಾರೆ’ ಎಂದು ಉಲ್ಲೇಖಿಸಿರುವುದಾಗಿ ಸರ್ಕಾರದ ಅಧಿಕೃತ ಪ್ರಕಟಣೆಯಲ್ಲಿ ಹೇಳಲಾಗಿದೆ. 

ಸಚಿವ ವಿ. ಸೆಂಥಿಲ್‌ ಬಾಲಾಜಿ ಅವರನ್ನು ಮಂತ್ರಿ ಮಂಡಲದಿಂದ ವಜಾ ಮಾಡಿದ್ದು, ನಂತರ ಹಿಂಪಡೆದ ನಡೆಯ ಬಗ್ಗೆ ಸ್ಟಾಲಿನ್‌ ತಮ್ಮ ಪತ್ರದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಒಂದೆಡೆ, ರವಿ ಅವರು ಹಿಂದಿನ ಎಐಎಡಿಎಂಕೆ ಸರ್ಕಾರದಲ್ಲಿ ಸಚಿವರಾಗಿದ್ದವರ ವಿಚಾರಣೆಗೆ ಅನುಮತಿ ನೀಡುವುದನ್ನು ವಿಳಂಬ ಮಾಡುತ್ತಿದ್ದಾರೆ. ಇನ್ನೊಂದೆಡೆ, ಸೆಂಥಿಲ್ ಬಾಲಾಜಿ ವಿಷಯದಲ್ಲಿ ತಮ್ಮ ಆತುರದ ನಡೆ ಪ್ರದರ್ಶಿಸಿದ್ದಾರೆ. ಈ ಮೂಲಕ ಅವರು ತಮ್ಮ ರಾಜಕೀಯ ಒಲವನ್ನು ಬಹಿರಂಗಪಡಿಸಿದ್ದಾರೆ’ ಎಂದು ಸ್ಟಾಲಿನ್‌ ಆರೋಪಿಸಿದ್ದಾರೆ. 

ADVERTISEMENT

‘ತಮ್ಮ ನಡವಳಿಕೆ ಮತ್ತು ಕ್ರಮದಿಂದ ರಾಜ್ಯಪಾಲರು ಪಕ್ಷಪಾತಿ ಎಂದು ಸಾಬೀತಾಗಿದೆ. ರಾಜ್ಯಪಾಲರ ಹುದ್ದೆಯಲ್ಲಿರಲು ಅವರು ಅನರ್ಹರು ಎಂದು ಸಾಬೀತುಪಡಿಸಿದ್ದಾರೆ. ರಾಜ್ಯಪಾಲರಂಥ ಉನ್ನತ ಹುದ್ದೆಯಿಂದ ವಜಾ ಮಾಡಲು ರವಿ ಯೋಗ್ಯರು’ ಎಂದು ಸಿಎಂ ತಮ್ಮ ಪತ್ರದಲ್ಲಿ ಒತ್ತಿ ಹೇಳಿದ್ದಾರೆ. 

‘ತಮಿಳುನಾಡು ರಾಜ್ಯಪಾಲರು ಅಧಿಕಾರದಲ್ಲಿ ಮುಂದುವರಿಯುವುದು ಭಾರತದ ಸಂವಿಧಾನದ ರಚನಾಕಾರರ ಭಾವನೆಗಳು ಮತ್ತು ಘನತೆಯನ್ನು ಕಾಪಾಡುವ ದೃಷ್ಟಿಯಿಂದ ಸೂಕ್ತವೇ’ ಎಂದು ನಿರ್ಧರಿಸುವ ವಿಚಾರವನ್ನು ರಾಷ್ಟ್ರಪತಿಗಳಿಗೇ ಬಿಡುವುದಾಗಿ ಸ್ಟಾಲಿನ್‌ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.