ಚೆನ್ನೈ: ತಮಿಳುನಾಡು ಸರ್ಕಾರದ ಅಧೀನದಲ್ಲಿರುವ ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆಯನ್ನು ರಾಜ್ಯಪಾಲ ಆರ್.ಎನ್. ರವಿ ವಾರಾಂತ್ಯದಲ್ಲಿ ಕರೆದಿದ್ದಾರೆ.
ನೀಲಗಿರಿ ಜಿಲ್ಲೆಯಲ್ಲಿ ಏ. 25ರಿಂದ ಮೂರು ದಿನ ನಡೆಯಲಿರುವ ಈ ಸಮಾವೇಶದಲ್ಲಿ ಭಾಗಿಯಾಗುವಂತೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರಿಗೆ ಆಹ್ವಾನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಶ್ವವಿದ್ಯಾಲಯಗಳಿಗೆ ನೇಮಕದ ಅಧಿಕಾರವನ್ನು ರಾಜ್ಯಪಾಲರಿಂದ ವಾಪಸ್ ಪಡೆಯುವ ಮಸೂದೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಹಾಗೂ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕುಲಪತಿಗಳು, ರಿಜಿಸ್ಟ್ರಾರ್‌ಗಳೊಂದಿಗೆ ಸಭೆ ನಡೆಸಿದ ವಾರದ ನಂತರ ರಾಜ್ಯಪಾಲರು ಈ ಸಮಾವೇಶ ಆಯೋಜಿಸಿದ್ದಾರೆ.
ಈ ಸಭೆಯು ರಾಜ್ಯಪಾಲರು ಮತ್ತು ತಮಿಳುನಾಡು ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಜಟಾಪಟಿಗೆ ವೇದಿಕೆಯಾಗಲಿದೆ ಎನ್ನಲಾಗಿದೆ.
ರಾಜ್ಯಪಾಲರು ಸರ್ಕಾರಿ ಅನುದಾನಿತ 18 ವಿಶ್ವವಿದ್ಯಾಲಯಗಳ ಕುಲಾಧಿಪತಿಯಾಗಿ ಸಭೆ ಕರೆದಿದ್ದಾರೆ. ಹೊಸ ಕಾನೂನು ಬಂದರೂ ಅವರ ಅಧಿಕಾರ ಬದಲಾಗಿಲ್ಲ. ಕುಲಪತಿಗಳನ್ನು ನೇಮಿಸುವ ಮತ್ತು ತೆಗೆದುಹಾಕುವ ಅಧಿಕಾರವನ್ನು ಮಾತ್ರ ಸರ್ಕಾರ ವರ್ಗಾಯಿಸಿಕೊಂಡಿದೆ. ಸಭೆ ಕರೆದಿರುವುದು ಇದೇ ಮೊದಲಲ್ಲ ಎಂದು ರಾಜಭವನದ ಮೂಲಗಳು ತಿಳಿಸಿವೆ.
ರಾಜ್ಯ ಸರ್ಕಾರ ನಡೆಸುತ್ತಿರುವ 20 ವಿಶ್ವವಿದ್ಯಾಲಯಗಳ ಪೈಕಿ 18 ವಿಶ್ವವಿದ್ಯಾಲಯಕ್ಕೆ ರಾಜ್ಯಪಾಲರೇ ಕುಲಾಧಿಪತಿ ಆಗಿರುವುದರಿಂದ ಈ ಸಭೆ ಕರೆದಿದ್ದಾರೆ ಎಂದು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.