ADVERTISEMENT

ಮಮತಾ ಬ್ಯಾನರ್ಜಿ ಹಾಗೂ ರಾಜ್ಯಪಾಲ ಜಗದೀಪ್‌ ಧನಕರ್‌ ನಡುವೆ ವಾಕ್ಸಮರ

ಪಶ್ಚಿಮ ಬಂಗಾಳ ಸಿ.ಎಂ.ಗೆ ರಾಜ್ಯಪಾಲ ಧನಕರ್‌ ಪತ್ರ

ಪಿಟಿಐ
Published 27 ಸೆಪ್ಟೆಂಬರ್ 2020, 11:36 IST
Last Updated 27 ಸೆಪ್ಟೆಂಬರ್ 2020, 11:36 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಕೋಲ್ಕತ್ತ:ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ರಾಜ್ಯಪಾಲ ಜಗದೀಪ್‌ ಧನಕರ್‌ ನಡುವಿನ ಜಟಾಪಟಿ ತೀವ್ರಗೊಂಡಿದೆ. ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಇಬ್ಬರ ನಡುವೆ ಪತ್ರಗಳ ಮೂಲಕವೇ ವಾಕ್ಸಮರ ಮುಂದುವರಿದಿದೆ.

ಪ್ರಧಾನ ಮಂತ್ರಿ ಕಿಸಾನ್‌ ನಿಧಿ (ಪಿಎಂ–ಕಿಸಾನ್‌ ನಿಧಿ) ಅಡಿ ರೈತರಿಗೆ ಹಣ ವರ್ಗಾವಣೆ ಮಾಡುವ ವಿಷಯ ಈಗ ಇಬ್ಬರ ನಡುವಿನ ಜಟಾಪಟಿಗೆ ಕಾರಣವಾಗಿರುವ ಹೊಸ ವಿಷಯ.

‘ಸಂವಿಧಾನದ ಚೌಕಟ್ಟಿನೊಳಗೇ ಕಾರ್ಯನಿರ್ವಹಿಸಿ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯಪಾಲರಿಗೆ ಶನಿವಾರ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಯಾಗಿ, ಮುಖ್ಯಮಂತ್ರಿಗೆ ಭಾನುವಾರ ಪತ್ರವೊಂದನ್ನು ರವಾನಿಸಿರುವ ರಾಜ್ಯಪಾಲರು, ‘ಪಿಎಂ ಕಿಸಾನ್‌ ಅಡಿ ರೈತರಿಗೆ ಕೇಂದ್ರ ನೀಡುವ ಹಣವನ್ನು ಅವರ ಖಾತೆಗೆ ವರ್ಗಾಯಿಸಲು ರಾಜ್ಯ ಸರ್ಕಾರವೇಕೆ ಮಧ್ಯವರ್ತಿಯಾಗಲು ಬಯಸುತ್ತದೆ’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ವಾರದ ಹಿಂದೆ ಕೇಂದ್ರಕ್ಕೆ ಪತ್ರ ಬರೆದಿದ್ದ ಬ್ಯಾನರ್ಜಿ, ‘ಪಿಎಂ ಕಿಸಾನ್‌ ಮತ್ತು ಆಯುಷ್ಮಾನ್‌ ಭಾರತ್‌ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೊಳಿಸಲು ಸಿದ್ಧ. ಆದರೆ, ಈ ಯೋಜನೆಗಳ ಹಣವನ್ನು ರಾಜ್ಯ ಸರ್ಕಾರದ ಮೂಲಕವೇ ಫಲಾನುಭವಿಗಳಿಗೆ ತಲುಪಿಸಲು ಅವಕಾಶ ನೀಡಿದರೆ ಮಾತ್ರ ಅನುಷ್ಠಾನ ಸಾಧ್ಯ’ ಎಂದು ತಿಳಿಸಿದ್ದರು.

ಬ್ಯಾನರ್ಜಿ ಮುಂದಿಟ್ಟಿದ್ದ ಈ ಮನವಿ ಬಗ್ಗೆ ಅಸಮಾಧಾನ ಹೊರ ಹಾಕಿದ್ದ ರಾಜ್ಯಪಾಲ ಧನಕರ್‌, ‘ಇದು ಹಿಮ್ಮುಖ ನಡೆ’ ಎಂದಿದ್ದರು. ಇದಕ್ಕೆ ಅವಕಾಶ ಕೊಟ್ಟರೆ ಭಾರಿ ಭ್ರಷ್ಟಾಚಾರಕ್ಕೆ ದಾರಿ ಮಾಢಿಕೊಟ್ಟಂತಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.