ನವದೆಹಲಿ: ವಿಚಾರವಾದಿ ಗೋವಿಂದ ಪಾನ್ಸರೆ ಹತ್ಯೆ ಪ್ರಕರಣದ ತನಿಖೆ ಕುರಿತು ಮೇಲ್ವಿಚಾರಣೆ ಅಗತ್ಯ ಇಲ್ಲ ಎಂಬ ಬಾಂಬೆ ಹೈಕೋರ್ಟ್ ಆದೇಶದ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಬಾಂಬೆ ಹೈಕೋರ್ಟ್ ಆದೇಶ ಪ್ರಶ್ನಿಸಿ, ಪಾನ್ಸರೆ ಅವರ ಪುತ್ರಿ ಹಾಗೂ ಸೊಸೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಎಂ.ಎಂ.ಸುಂದ್ರೇಶ್ ಹಾಗೂ ಎನ್.ಕೋಟೀಶ್ವರ ಸಿಂಗ್ ಅವರು ಇದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿ, ಮಹಾರಾಷ್ಟ್ರ ಸರ್ಕಾರಕ್ಕೆ ನೋಟಿಸ್ ನೀಡಿ ಸೆಪ್ಟೆಂಬರ್ 1ರಂದು ಆದೇಶಿಸಿದೆ.
ಸಿಪಿಐ ನಾಯಕ ಹಾಗೂ ಲೇಖಕರಾಗಿದ್ದ ಪಾನ್ಸರೆ ಅವರು, ಪತ್ನಿ ಉಮಾ ಅವರೊಂದಿಗೆ ಕೊಲ್ಹಾಪುರದಲ್ಲಿ 2015ರ ಫೆಬ್ರುವರಿ 16ರಂದು ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ್ದಾಗ, ದಂಪತಿ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಪಾನ್ಸರೆ ಅವರು ಫೆಬ್ರುವರಿ 20ರಂದು ಮೃತಪಟ್ಟರೆ, ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದರು.
2016ರಿಂದ ಹೈಕೋರ್ಟ್, ತನಿಖೆಯ ಮೇಲ್ವಿಚಾರಣೆ ನಡೆಸುತ್ತಿತ್ತು. ಆರಂಭದಲ್ಲಿ ಎಸ್‌ಐಟಿ ನಡೆಸುತ್ತಿದ್ದ ತನಿಖೆಯನ್ನು 2022ರ ಆಗಸ್ಟ್ 3ರಂದು ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹ ದಳಕ್ಕೆ (ಎಟಿಎಸ್) ವಹಿಸಲಾಗಿತ್ತು.
‘ಎಟಿಎಸ್ ನಡೆಸುತ್ತಿರುವ ತನಿಖೆಯಲ್ಲಿ ಗಮನಾರ್ಹ ಪ್ರಗತಿ ಇರಲಿಲ್ಲ. ಇದನ್ನು ಪ್ರಶ್ನಿಸಿ ನಾವು ಮೇಲ್ಮನವಿ ಸಲ್ಲಿಸಿದ್ದೆವು. ತನಿಖೆಯ ಮೇಲ್ವಿಚಾರಣೆ ಅಗತ್ಯ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದ ಹೈಕೋರ್ಟ್, ನಮ್ಮ ಅರ್ಜಿಯನ್ನು ವಜಾಗೊಳಿಸಿದೆ’ ಎಂಬುದು ಅರ್ಜಿದಾರರ ವಾದವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.