ADVERTISEMENT

ಸುಳ್ಳು ಸುದ್ದಿ ಮೂಲ ಪತ್ತೆಹಚ್ಚಿ: ವಾಟ್ಸ್‌ ಆ್ಯಪ್‌ಗೆ ಕೇಂದ್ರ ಸೂಚನೆ

ಪಿಟಿಐ
Published 21 ಆಗಸ್ಟ್ 2018, 17:34 IST
Last Updated 21 ಆಗಸ್ಟ್ 2018, 17:34 IST
   

ನವದೆಹಲಿ: ವಾಟ್ಸ್ ಆ್ಯಪ್‌ನಲ್ಲಿ ಹರಿದಾಡುವ ಸುಳ್ಳು ಸುದ್ದಿ ಮತ್ತು ಪ್ರಚೋದನಕಾರಿ ಸಂದೇಶಗಳನ್ನು ಹತ್ತಿಕ್ಕಲು, ಇವುಗಳ ಮೂಲ ಪತ್ತೆಗೆ ತಾಂತ್ರಿಕ ಪರಿಹಾರ ಕಂಡುಕೊಳ್ಳಬೇಕೆಂದು ವಾಟ್ಸ್‌ ಆ್ಯಪ್‌ ಸಂಸ್ಥೆಗೆ ಕೇಂದ್ರ ಸರ್ಕಾರ ಮಂಗಳವಾರ ನಿರ್ದೇಶನ ನೀಡಿದೆ.

ಇದಕ್ಕಾಗಿಯೇ ದೇಶದಲ್ಲಿ ವಾಟ್ಸ್‌ ಆ್ಯಪ್‌ ಸಂಸ್ಥೆ ಪ್ರತ್ಯೇಕ ವಿಭಾಗವೊಂದನ್ನು ತೆರೆಯಬೇಕು. ಕುಂದುಕೊರತೆ ಆಲಿಸಲು ಅಧಿಕಾರಿಗಳನ್ನೂ ನೇಮಿಸಬೇಕು. ಜಾಲತಾಣದಲ್ಲಿ ಸಂದೇಶ ಕಳುಹಿಸುವ ವ್ಯಕ್ತಿಯ ಸ್ಥಳೀಯ ಅಸ್ತಿತ್ವ ಸಾದರಪಡಿಸುವಿಕೆಯನ್ನು ವಾಟ್ಸ್ ಆ್ಯಪ್‌ನಲ್ಲಿ ಕಡ್ಡಾಯಗೊಳಿಸಬೇಕು ಎಂದು ಸೂಚನೆ ನೀಡಿದೆ.

ವಾಟ್ಸ್‌ ಆ್ಯಪ್‌ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಕ್ರಿಸ್‌ ಡೇನಿಯಲ್‌ ಅವರೊಂದಿಗೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಎಸ್‌.ರವಿಶಂಕರ್‌ ಪ್ರಸಾದ್‌ ಅವರು ಸಭೆ ನಡೆಸಿದ ನಂತರ, ಈ ವಿಷಯ ತಿಳಿಸಿದ್ದಾರೆ.

ADVERTISEMENT

ಡೇನಿಯಲ್‌ ಅವರ ಜತೆಗಿನ ಸಭೆ ಫಲಪ್ರದವಾಗಿದೆ. ಸರ್ಕಾರ ನೀಡಿರುವ ಸೂಚನೆಗಳ ಅನುಸಾರ ಕ್ರಮ ವಹಿಸುವುದಾಗಿಯೂ ಅವರು ಭರವಸೆ ನೀಡಿದ್ದಾರೆಂದು ಸಚಿವರು ಹೇಳಿದ್ದಾರೆ.

ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಆ್ಯಪ್ ಸಂಸ್ಥೆ ದೇಶದ ಡಿಜಿಟಲ್ ವ್ಯವಸ್ಥೆಗೆ ಅಪಾರ ಕೊಡುಗೆ ನೀಡಿರುವುದು ಪ್ರಶಂಸನೀಯ. ಆದರೆ, ಗುಂಪು ಹತ್ಯೆಗೆ ಪ್ರಚೋದನೆ, ಅಶ್ಲೀಲ ಚಿತ್ರ ಮತ್ತು ವಿಡಿಯೊ ಪ್ರಸಾರ ಮಾಡಿ ಪ್ರತೀಕಾರ ತೀರಿಸಿಕೊಳ್ಳುವುದು ದೇಶದ ಕಾನೂನಿಗೆ ವಿರುದ್ಧವಾದುದು. ಹೀಗಾಗಿ ಇಂತಹ ಕೆಟ್ಟ ಬೆಳವಣಿಗೆಗೆ ವೇದಿಕೆ ಒದಗಿಸದಂತೆ ಸಂಸ್ಥೆಗೆ ಸೂಚಿಸಲಾಗಿದೆ ಎಂದರು.

‘ನಕಲಿ ಸಂದೇಶಗಳ ಕಡಿವಾಣಕ್ಕೆ ವಾಟ್ಸ್ ಆ್ಯಪ್‌ ಸಂಸ್ಥೆ ಕ್ರಮ ತೆಗೆದುಕೊಳ್ಳದಿದ್ದರೆ ನಾವು ಸಂಸ್ಥೆಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.