ADVERTISEMENT

ಜಮ್ಮು ಮತ್ತು ಕಾಶ್ಮೀರ: ಉಗ್ರ, ಪ್ರತ್ಯೇಕತಾ ಸಂಘಟನೆಗಳ ನಿಷೇಧ

ಜಮ್ಮು ಮತ್ತು ಕಾಶ್ಮೀರ: ಭಯೋತ್ಪಾದನಾ ನಿಗ್ರಹ ಕಾನೂನಿನಡಿ ಕ್ರಮ

ಪಿಟಿಐ
Published 16 ಮಾರ್ಚ್ 2024, 14:51 IST
Last Updated 16 ಮಾರ್ಚ್ 2024, 14:51 IST
   

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪೀಪಲ್ಸ್‌ ಫ್ರೀಡಂ ಲೀಗ್‌ ಹಾಗೂ ಪ್ರತ್ಯೇಕತಾವಾದಿ ಸಂಘಟನೆಯಾದ ಹುರಿಯತ್‌ ಕಾನ್ಫರೆನ್ಸ್‌ನೊಂದಿಗೆ ನಂಟು ಹೊಂದಿದ್ದ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್‌ ಲೀಗ್‌ನ ಎಲ್ಲ ಬಣಗಳನ್ನು ಭಯೋತ್ಪಾದನಾ ನಿಗ್ರಹ ಕಾನೂನಿನ ಅಡಿಯಲ್ಲಿ ಕೇಂದ್ರ ಸರ್ಕಾರ ಶನಿವಾರ ನಿಷೇಧಿಸಿದೆ.

ಇದರ ಜೊತೆಗೆ ಬಂಧಿತ ಉಗ್ರ ಯಾಸಿನ್‌ ಮಲಿಕ್‌ ನೇತೃತ್ವದ ಜಮ್ಮು ಕಾಶ್ಮೀರ ಲಿಬರೇಷನ್‌ ಫ್ರಂಟ್‌ನ (ಜೆಕೆಎಲ್‌ಎಫ್‌) ನಿಷೇಧದ ಅವಧಿಯನ್ನು ಇನ್ನೂ ಐದು ವರ್ಷದವರೆಗೆ ವಿಸ್ತರಿಸಲಾಗಿದೆ.

ಲೋಕಸಭಾ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗುವ ಕೆಲವು ಗಂಟೆಗಳ ಮುನ್ನವಷ್ಟೇ ಕೇಂದ್ರ ಸರ್ಕಾರ ಈ ಘೋಷಣೆ ಮಾಡಿದೆ.

ADVERTISEMENT

ಉಗ್ರ, ಪ್ರತ್ಯೇಕತಾ ಸಂಘಟನೆಗಳ ನಿಷೇಧದ ಕುರಿತು ಮಾಹಿತಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, ‘ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಸಂಘಟನೆಗಳು ಮತ್ತು ಜನರನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಉಳಿಸುವುದಿಲ್ಲ’ ಎಂದು ಹೇಳಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್‌ ಫ್ರೀಡಂ ಲೀಗ್‌ (ಜೆಕೆಪಿಎಫ್‌ಎಲ್‌) ಅನ್ನು ಕಾನೂನು ಬಾಹಿರ ಸಂಘಟನೆ ಎಂದು ಕೇಂದ್ರ ಸರ್ಕಾರ ಗುರುತಿಸಿ, ಈದು ವರ್ಷಗಳ ನಿಷೇಧ ಹೇರಿದೆ. ಈ ಸಂಘಟನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಮೂಲಕ ಪ್ರತ್ಯೇಕತಾವಾದವನ್ನು ಪ್ರಚೋದಿಸುತ್ತಿತ್ತು. ಮೋದಿ ಅವರ ಭಯೋತ್ಪಾದನೆಯೆಡೆಗಿನ ಶೂನ್ಯ ಸಹಿಷ್ಣುತಾ ನೀತಿಯನ್ನು ಅನುಸರಿಸಿ, ಕೇಂದ್ರ ಗೃಹ ಸಚಿವಾಲಯವು ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್‌ ಲೀಗ್‌ನ (ಜೆಕೆಪಿಎಲ್‌) ಬಣಗಳನ್ನೂ ಸಹ ಕಾನೂನು ಬಾಹಿರ ಸಂಘಟನೆ ಎಂದು ಘೋಷಿಸಿದೆ. ಈ ಸಂಘಟನೆಯಲ್ಲಿ ಜೆಕೆಪಿಎಲ್‌ (ಮುಕ್ತಾರ್‌ ಅಹ್ಮದ್‌ ವಾಜಾ), ಜೆಕೆಪಿಎಲ್‌ (ಬಶೀರ್ ಅಹ್ಮದ್‌ ತೋಟಾ), ಜೆಕೆಪಿಎಲ್‌ (ಗುಲಾಮ್‌ ಮೊಹಮದ್‌ ಖಾನ್‌), ಯಾಕೂಬ್‌ ಶೇಖ್‌ ನೇತೃತ್ವದ ಜೆಕೆಪಿಎಲ್‌ (ಆಜಿಜ್‌ ಶೇಖ್‌) ಎಂಬ ಬಣಗಳಿವೆ’ ಎಂದು ಅಮಿತ್‌ ಶಾ ಅವರು ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.